ಜಗತ್ತಿನಾದ್ಯಂತ ದೊಡ್ಡ ಬ್ರ್ಯಾಂಡ್ ಆಗಿರುವ ಟೆಸ್ಲಾ ಮೋಟಾರ್ಸ್‌ನ ವಿಶಿಷ್ಟ ಸೌಲಭ್ಯಗಳನ್ನು ಹೊಂದಿರುವ ಕಾರುಗಳು, ಎಲೆಕ್ಟ್ರಿಕ್ ವಾಹನಗಳು ಭಾರತಕ್ಕೆ ಯಾಕೆ ಪ್ರವೇಶಿಸುತ್ತಿಲ್ಲ ಎಂಬ ಕಾರಣವನ್ನು ಸ್ವತಃ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಬಯಲು ಮಾಡಿದ್ದಾರೆ.
ಟ್ವಿಟರ್‌ನಲ್ಲಿ ಟೆಸ್ಲಾ ಪ್ರೇಮಿಯಾದ ಪ್ರಣಯ್ ಎನ್ನುವವರು ಪ್ರಶ್ನೆ ಕೇಳಿದ್ದಾರೆ. ಮಸ್ಕ್ ಅವರೇ, ನಿಮ್ಮ ಎಲೆಕ್ಟ್ರಿಕ್ ಮತ್ತು ಇತರ ಕಾರುಗಳು ದೇಶದ ಎಲ್ಲ ಮೂಲೆಗಳಲ್ಲೂ ಕಾಣಬೇಕು ಎನ್ನುವ ಆಸೆ ಇದೆ. ಭಾರತಕ್ಕೆ ಪ್ರವೇಶ ಯಾವಾಗ ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್ ಅವರು, ಸರಕಾರದೊಂದಿಗೆ ಇನ್ನೂ ಅನೇಕ ಸವಾಲುಗಳ ಪರಿಹಾರದಲ್ಲಿ ಮುಳುಗಿದ್ದೇವೆ ಎಂದಿದ್ದಾರೆ. ಅಲ್ಲಿಗೆ, ಸದ್ಯದ ಮಟ್ಟಿಗೆ ಮಸ್ಕ್ ಅವರ ಕಾರುಗಳು ಭಾರತದ ಮಾರುಕಟ್ಟೆ ಪ್ರವೇಶಿಸಲ್ಲ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದ ಮಸ್ಕ್, ವಿದೇಶಿ ಮೂಲದ ಎಲೆಕ್ಟ್ರಿಕ್ ವಾಹನಗಳು ಭಾರತದ ಮಾರುಕಟ್ಟೆ ಪ್ರವೇಶಕ್ಕೆ ವಿಧಿಸಲಾಗಿರುವ ಶೇ.60 ರಿಂದ 100ರಷ್ಟು ತೆರಿಗೆಯನ್ನು ಕಡಿಮೆ ಮಾಡಲು ಕೋರಿದ್ದರು. ಆದರೆ ಇದಕ್ಕೆ ಸರಕಾರದಿಂದ ಸಮರ್ಪಕ ಉತ್ತರ ಸಿಕ್ಕಿರಲಿಲ್ಲ.
ಕೊರೊನಾ ಸಾವುಗಳ ಕುರಿತು ಶಾಕಿಂಗ್ ಸಂಗತಿ ಬಹಿರಂಗ; ಲಸಿಕೆ ಪಡೆಯದವರೇ ಮಹಾಮಾರಿಗೆ ಅತಿಹೆಚ್ಚು ಟಾರ್ಗೆಟ್
ಮಸ್ಕ್ ಪ್ರಕಾರ, ವಿಶ್ವದಲ್ಲೇ ಅತ್ಯಂತ ದೊಡ್ಡ ಮಟ್ಟದ ತೆರಿಗೆಯನ್ನು ವಿದೇಶಿ ಉದ್ದಿಮೆಗಳ ಮೇಲೆ ಭಾರತ ಹೇರುತ್ತಿದೆ. ಇದರಿಂದಾಗಿ ಭಾರತದ ಸ್ಥಳೀಯ ಮಾರುಕಟ್ಟೆಯ ಉದ್ದಿಮೆಗಳು ವಿದೇಶಿ ಕಂಪನಿಗಳ ಜತೆಗೆ ಸಹಭಾಗಿತ್ವಕ್ಕೆ ಕಷ್ಟವಾಗುತ್ತಿದೆ. ದೇಶೀಯ ಉತ್ಪಾದನೆಯಲ್ಲಿ ವಿದೇಶಿ ಹೂಡಿಕೆ ಕೂಡ ಹರಿದುಬರಲು ಸಾಧ್ಯವಾಗುತ್ತಿಲ್ಲ.
ಸದ್ಯಕ್ಕೆ ಭಾರತದಲ್ಲಿ ಏಳು ಎಲೆಕ್ಟ್ರಿಕ್ ಕಾರುಗಳ ತಯಾರಕರಿಗೆ ಅಗತ್ಯ ಅನುಮತಿ ಸಿಕ್ಕಿದೆ. ಆಗಸ್ಟ್‌ನಲ್ಲಿ ಟೆಸ್ಲಾದ ಮಾಡೆಲ್ 3ಎಸ್, ಮಾಡೆಲ್ ವೈಎಸ್‌ಗೆ ಪ್ರಾಥಮಿಕ ಅನುಮತಿಗಳನ್ನು ಸರಕಾರ ನೀಡಿದೆ ಎನ್ನಲಾಗಿದೆ. ಆದರೆ ರಸ್ತೆಗಿಳಿಯಲು ಮಾತ್ರ ಇನ್ನೂ ಕೆಲವು ತಿಂಗಳುಗಳ ಕಾಲ ಟೆಸ್ಲಾ ಕಾಯಲೇಬೇಕಿದೆ.