ಟೆಸ್ಲಾ ಸಮೂಹದ ಬಾಸ್ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಕ್ರಿಯರಾಗಿರುವ ಉದ್ಯಮಿ. ಟ್ವಿಟರ್‌ನಲ್ಲಿ ಹಲವಾರು ವಿಷಯಗಳ ಬಗ್ಗೆ ಮಸ್ಕ್ ನೆಟ್ಟಿಗರೊಂದಿಗೆ ಸಂವಹನ ನಡೆಸುತ್ತಲೇ ಇರುತ್ತಾರೆ.
ಇದೀಗ ತಮ್ಮ ಗ್ರಾಹಕರೊಂದಿಗೆ ತಾವು ಎಷ್ಟು ಬೇಗ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂಬುದನ್ನು ತೋರಿಸಿರುವ ಮಸ್ಕ್, ತಮ್ಮ ಕಂಪನಿಯ ಎಲೆಕ್ಟ್ರಿಕ್ ಕಾರುಗಳ ಸಪೋರ್ಟ್ ಅಪ್ಲಿಕೇಶನ್‌ನ ಸರ್ವರ್ ಡೌನ್ ಆಗಿರುವ ವಿಷಯದ ಬಗ್ಗೆ ದಕ್ಷಿಣ ಕೊರಿಯಾದ ಗ್ರಾಹಕರೊಬ್ಬರಿಂದ ಬಂದ ದೂರಿಗೆ ಮೂರೇ ನಿಮಿಷದಲ್ಲಿ ಸ್ಪಂದಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ದಕ್ಷಿಣ ಕೊರಿಯಾದಿಂದ ಟೆಸ್ಲಾ ವಾಹನವೊಂದರ ಮಾಲೀಕರಾದ ಜೇವಾನ್ ಚೋ ಟ್ವಿಟ್ ಮಾಡುವ ಮೂಲಕ ತಮಗಾದ ಸಮಸ್ಯೆಯನ್ನು ವಿವರಿಸಿದ್ದಾರೆ. ಅವರ ಈ ಟ್ವೀಟ್‌ಗೆ ಸ್ಪೇಸ್‌ಎಕ್ಸ್ ಸಿಇಓ ಮೂರೇ ನಿಮಿಷಗಳಲ್ಲಿ ಪ್ರತಿಕ್ರಿಯಿಸಿ, ಸಮಸ್ಯೆಯನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದ್ದಾರೆ.
ಇದಾದ ಐದು ಗಂಟೆಗಳ ಒಳಗೆ ಸಮಸ್ಯೆ ಎಲ್ಲಿ ಆಗಿದೆ ಎಂದು ಅರಿತುಕೊಂಡ ಮಸ್ಕ್, ಏನಾಗಿದೆ ಎಂದು ತಮ್ಮ ಪ್ರೀತಿಯ ಗ್ರಾಹಕರಿಗೆ ತಿಳಿಯಪಡಿಸಿದ್ದಾರೆ.
“ಕೂಡಲೇ ಆನ್ಲೈನ್‌ಗೆ ಮರಳಿ ಬರಲಿದ್ದೇನೆ. ನಮ್ಮ ಜಾಲತಾಣದ ದಟ್ಟಣೆಯನ್ನು ಅಕಸ್ಮಾತ್ ಆಗಿ ಹೆಚ್ಚಿಸಿದ್ದೇವೆ ಎನಿಸುತ್ತದೆ. ಕ್ಷಮೆಯಿರಲಿ, ಮುಂದೆ ಹೀಗಾಗದಂತೆ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ,” ಎಂದು ಮಸ್ಕ್ ಪ್ರಾಮಾಣಿಕವಾದ ಉತ್ತರ ನೀಡಿದ್ದಾರೆ.
ಮಸ್ಕ್‌ರ ಈ ಪ್ರತಿಕ್ರಿಯೆಯನ್ನು ಮೆಚ್ಚಿದ ನೆಟ್ಟಿಗರೊಬ್ಬರು, “ಶುಕ್ರವಾರ ಸಂಜೆಯಂದು ಇಂಥ ಸಮಸ್ಯೆಯೊಂದನ್ನು ಪರಿಶೀಲಿಸಲು ತಲೆ ಕೆಡಿಸಿಕೊಂಡ, ನಾನು ಕಂಡಂಥ, ಒಬ್ಬೇ ಒಬ್ಬರು ಸಿಇಓ ನೀವೇ. ನೀವೀಗ ಇನ್ನುಳಿದ ಸಿಇಓಗಳಿಗೆ ಅನುಸರಿಸಲು ಉನ್ನತವಾದ ನಿದರ್ಶನ ಹುಟ್ಟುಹಾಕಿದ್ದೀರಿ!” ಎಂದು ಟ್ವೀಟ್ ಮಾಡಿದ್ದಾರೆ.