
ಬೆಂಗಳೂರು: ನಾನಾ ಬಗೆಯ ವೈದ್ಯಕೀಯ ಕೋರ್ಸುಗಳಿಗೆ ರಾಜ್ಯದಲ್ಲಿ ಪ್ರವೇಶಾತಿ ಬಯಸಿ ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಲು ಜುಲೈ 21ರ ಮಧ್ಯರಾತ್ರಿಯವರೆಗೂ ಅವಕಾಶ ಕೊಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.
ಶುಕ್ರವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ ಪದವಿಗಳಿಗೆ ಸೇರಬಯಸಿರುವ ಅಭ್ಯರ್ಥಿಗಳಿಗೆ ಇದು ಅನ್ವಯವಾಗಲಿದೆ. ಆನ್‌ಲೈನ್ ಅರ್ಜಿ ತುಂಬಿದ ನಂತರ ನಿಗದಿತ ಶುಲ್ಕವನ್ನು ಜುಲೈ 22ರ ಸಂಜೆ 6 ಗಂಟೆಯ ಒಳಗೆ ತುಂಬಬೇಕು. ಜತೆಗೆ ಅರ್ಜಿ ತುಂಬುವುದಕ್ಕೆ ಮೊದಲು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ಪ್ರಕಟಿಸಿರುವ ಸಂಬಂಧಿತ ಸೂಚನೆಗಳನ್ನು ಗಮನಿಸಿ, ಕಡ್ಡಾಯವಾಗಿ ಪಾಲಿಸಬೇಕು ಎಂದಿದ್ದಾರೆ.
ರಾಜ್ಯದಲ್ಲಿ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶಾತಿ ಬಯಸುವ ಹೊರರಾಜ್ಯಗಳ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿ ಸವಲತ್ತುಗಳು ಅನ್ವಯಿಸುವುದಿಲ್ಲ. ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಕೂಡ ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಸಿಗುತ್ತವೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಸಿಇಟಿ ಬರೆದು, ದಾಖಲಾತಿಗಳ ಪರಿಶೀಲನೆ ಪೂರೈಸಿರುವ ಅಭ್ಯರ್ಥಿಗಳು ನೀಟ್ ಪರೀಕ್ಷೆಗಾಗಿ ತಮ್ಮ ಅರ್ಜಿಯಲ್ಲಿ ಯಾವುದೇ ಬದಲಾವಣೆ ಮಾಡದಿದ್ದ ಪಕ್ಷದಲ್ಲಿ ಅಂಥವರು ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗಾಗಿ ನಡೆಯುವ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಾದ ಅಗತ್ಯವಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಾಗೆಯೇ, ಆಯುರ್ವೇದ ಕಾಲೇಜುಗಳಲ್ಲಿ ಇರುವ ಅಖಿಲ ಭಾರತ ವ್ಯಾಪ್ತಿಯ ಶೇಕಡ 15ರಷ್ಟು ಸೀಟುಗಳನ್ನು ಹೊರತುಪಡಿಸಿ ಉಳಿದ ಶೇಕಡ 85ರಷ್ಟು ಸೀಟುಗಳನ್ನು ಪ್ರಾಧಿಕಾರದ ಮೂಲಕವೇ ಹಂಚಿಕೆ ಮಾಡಲಾಗುವುದು ಎಂದು ಹೇಳಲಾಗಿದೆ.