ಮೈಸೂರು: ಗಾಯಗೊಂಡಿರುವ ಆನೆಯ ಚಿಕಿತ್ಸೆಗಾಗಿ ಮೈಸೂರಿನ ಪಶುವೈದ್ಯರೊಬ್ಬರು ಪಾದರಕ್ಷೆಯನ್ನು ತಯಾರಿಸಿದ್ದು, ಪಶುವೈದ್ಯರ ಈ ವಿಭಿನ್ನ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹರವೆ ಆನೆ ಕ್ಯಾಂಪ್ ನಲ್ಲಿರುವ 60 ವರ್ಷದ ಕುಮಾರಿ ಎಂಬ ಆನೆ ಕಾಲಿಗೆ ಗಾಯವಾಗಿತ್ತು. ಕುಮಾರಿ ಆನೆಯನ್ನು 2015ರಲ್ಲಿ ಕೇರಳ ಮೂಲದ ಸರ್ಕಸ್ ಕಂಪನಿಯಿಂದ ರಕ್ಷಣೆ ಮಾಡಿ ತರಲಾಗಿತ್ತು. ದೊಡ್ಡ ಹರವೆ ಆನೆ ಕ್ಯಾಂಪ್ ನಲ್ಲಿ ಕುಮಾರಿ ಆನೆ ಆಶ್ರಯ ಪಡೆದು ಆರಾಮವಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಕುಮಾರಿ ಆನೆ ಕಾಲಿಗೆ ಗಾಯವಾಗಿದ್ದು, ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಗಾಯ ಮಾಸುತ್ತಿಲ್ಲ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಶುವೈದ್ಯ ಡಾ. ರಮೇಶ್ ಅವರನ್ನು ಸಂಪರ್ಕಿಸಲಾಗಿತ್ತು. ಡಾ.ರಮೇಶ್ ಆನೆ ಕಾಲಿಗೆ ಪಾದರಕ್ಷೆ ತಯಾರಿಸಿ, ಔಷಧಿ ಹಚ್ಚಿ ಚಿಕಿತ್ಸೆ ನೀಡುತ್ತಿದ್ದಾರೆ.
ವಾಹನದ ಟೈಯರ್ ಬಳಸಿ ಪಾದರಕ್ಷೆ ತಯಾರಿಸಿದ್ದು, ಔಷಧಿಯನು ಪಾದರಕ್ಷೆಗೆ ಹಚ್ಚಿ, ಆನೆ ಕಾಲಿಗೆ ಅಳವಡಿಸಲಾಗಿದೆ. ಡಾ.ರಮೇಶ್ ಅವರ ಈ ವಿಭಿನ್ನ ಪ್ರಯತ್ನ ಯಶಸ್ವಿಯಾಗಿದ್ದು, ಆನೆ ಕಾಲಿನ ಗಾಯವೂ ವಾಸಿಯಾಗುತ್ತಿದೆ. ಕುಮಾರಿ ಆನೆ ಮತ್ತೆ ಲವಲವಿಕೆಯಿಂದ ಓಡಾಡುವಂತಾಗಿದೆ.