ಕಳೆದ ಎರಡು ದಿನಗಳಿಂದ, ಉತ್ತರಾಖಂಡದ ಪರಿಸ್ಥಿತಿ ಹದಗೆಡುತ್ತಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಉಂಟಾಗಿದೆ. ಗೌಳಾ ನದಿಯು ಉಗ್ರಸ್ವರೂಪಿಯಾಗಿ ತುಂಬಿ ಹರಿಯುತ್ತಿದೆ. ಈ ನಡುವೆ ನೈನಿತಾಲ್ನ ಗೌಳಾ ನದಿಯಲ್ಲಿ ಆನೆಯೊಂದು ದ್ವೀಪದಲ್ಲಿ ಸಿಲುಕಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಐಎಫ್ಎಸ್ ಅಧಿಕಾರಿ ಸುರೇಂದರ್ ಮೆಹ್ರಾ ಅವರು ಟ್ವಿಟ್ಟರ್ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ನೆಟ್ಟಿಗರನ್ನು ಆಘಾತಕ್ಕೀಡು ಮಾಡಿದೆ. ವಿಡಿಯೋದಲ್ಲಿ, ಆನೆಯು ಅಸಹಾಯಕವಾಗಿ ಪ್ರವಾಹದಿಂದ ಹೊರಬರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರವಾಹವನ್ನು ‘ಮಾನವ ನಿರ್ಮಿತ’ ದುರಂತ ಎಂದು ಕರೆದಿದ್ದಾರೆ. ಇನ್ನು, ಆನೆಯು ಬಹಳ ಪ್ರಯಾಸಪಟ್ಟು ನದಿ ದಾಟಿ ಅರಣ್ಯದತ್ತ ಸಾಗಿದೆ. ಅರಣ್ಯ ಇಲಾಖೆ ಕಾಡಿನ ಕಡೆಗೆ ತೆರಳಿದ್ದು, ಆನೆಯ ಚಲನೆಯನ್ನು ಗಮನಿಸಲಾಗುತ್ತಿದೆ ಎಂದು ಡಿಎಫ್ಒ ಸಂದೀಪ್ ಕುಮಾರ್ ಹೇಳಿದ್ದಾರೆ.