ಚಾಮರಾಜನಗರ: ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ಅರಣ್ಯ ವ್ಯಾಪ್ತಿಯ ಬಾಚಹಳ್ಳಿಯಲ್ಲಿ ಆನೆಯೊಂದು ಸಾವನ್ನಪ್ಪಿದೆ.
30 ವರ್ಷದ ಹೆಣ್ಣಾನೆ ಏಕಾಏಕಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಆನೆ ಆಂಥ್ರಾಕ್ಸ್ ಕಾಯಿಲೆಯಿಂದ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಮೃತ ಆನೆ ಪತ್ತೆಯಾಗಿದೆ.
ಸ್ಥಳಕ್ಕಾಗಮಿಸಿದ ಅರಣ್ಯ ಸಂರಕ್ಷಣಾಧಿಕರಿ ಸುರೇಶ್ ಹಾಗೂ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಪರಿಶೀಲನೆ ನಡೆಸಿದ್ದಾರೆ. ಆನೆಯ ಬಾಯಿ, ಕಿವಿ, ಬಾಲದಲ್ಲಿ ರಕ್ತ ಸೋರಿಕೆಯಾಗಿರುವುದು ಕಂಡುಬಂದಿದೆ. ಪರಿಶೀಲನೆ ನಡೆಸಿದ ಪಶು ವೈದ್ಯ ಡಾ.ಮಿರ್ಜಾ ವಾಸಿಂ, ಆನೆಯಲ್ಲಿ ಆಂಥ್ರಾಕ್ಸ್ ರೋಗ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬಂದಿವೆ. ಆನೆ ಅಂಗಾಂಗಗಳ ಮಾದರಿ ಸಂಗ್ರಹಿಸಿ ಬೆಂಗಳೂರಿನ ವಿಜ್ಞಾನ ಪ್ರಯೋಗ ಶಾಲೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಆನೆ ಮೃತದೇಹವನ್ನು ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಆಂಥ್ರಾಕ್ಸ್ ಅಥವಾ ನೆರಡಿ ರೋಗ ಮರಣಾಂತಿಕ ಕಾಯಿಲೆಯಾಗಿದ್ದು, ಇದು ಸಾಂಕ್ರಾಮಿಕ ರೋಗವಾಗಿದೆ. ಜಾನುವಾರುಗಳಲ್ಲಿ, ಕಾಡುಪ್ರಾಣಿಗಳಲ್ಲಿ ಕಂಡುಬರುವ ಕಾಯಿಲೆಯಾಗಿದೆ.