ಬಂಡೀಪುರದಲ್ಲಿ ಆನೆಯೊಂದು ಪ್ರವಾಸಿಗರನ್ನು ಬೆನ್ನಟ್ಟಿದ್ದು, ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಫೋಟೋ ತೆಗೆಸಿಕೊಳ್ಳಲು ಕಾರಿನಿಂದ ಇಳಿದಿದ್ದ ಇಬ್ಬರು ಪ್ರವಾಸಿಗರನ್ನು ಆನೆಯೊಂದು ಬೆನ್ನಟ್ಟುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆನೆಯಿಂದ ತಪ್ಪಿಸಿಕೊಳ್ಳುವಾಗ ಓರ್ವ ಪ್ರವಾಸಿಗ ಎಡವಿ ಬಿದ್ದಿದ್ದಾರೆ. ಅದೃಷ್ಟವಶಾತ್ ಆನೆ ಆತನನ್ನು ಏನೂ ಮಾಡದೇ ಹೋಗಿದೆ. ಅಬ್ಬಾ..ಬದುಕಿದೆ ಎಂದು ಆತ ನಿಟ್ಟುಸಿರು ಬಿಟ್ಟಿದ್ದಾನೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಮತ್ತು ಮೂಲೆಹೊಳೆ ನಡುವೆ ಈ ಘಟನೆ ನಡೆದಿದೆ. 20 ಸೆಕೆಂಡುಗಳ ವೀಡಿಯೊ ಕ್ಲಿಪ್ ನಲ್ಲಿ ಆನೆ ಅಡ್ಡಾಡಿಸಿದ ದೃಶ್ಯ ಸೆರೆಯಾಗಿದೆ.