ಹಾಸನ: ಕಾಡಾನೆ ದಾಳಿಗೆ ಕಾರ್ಮಿಕನೊಬ್ಬ ಬಲಿಯಾಗಿದ್ದು, ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ರಸ್ತೆ ತಡೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮತ್ತವರದಲ್ಲಿ ನಡೆದಿದೆ.
ಬೇಲೂರಿನ ಸುತ್ತಮುತ್ತಲ ಗ್ರಾಮದಲ್ಲಿ ಕಾಡಾನೆಗಳ ದಾಳಿ ಪ್ರಕರಣ ಹೆಚ್ಚುತ್ತಿದೆ. ಆದಾಗ್ಯೂ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಸೆರೆ ಹಿಡಿಯುವ ಕೆಲಸ ಮಾಡುತ್ತಿಲ್ಲ ಎಂದು ಈ ಹಿಂದಿನಿಂದಲೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಕಾಡಾನೆ ದಾಳಿಗೆ ವಸಂತ್ ಎಂಬ ಕಾರ್ಮಿಕ ಬಲಿಯಾಗಿದ್ದು, ಗ್ರಾಮಸ್ಥರ ಸಹನೆ ಕಟ್ಟೆಯೊಡೆದಿದೆ.
ಕಾಡಾನೆ ದಾಳಿಯಿಂದ ಗ್ರಾಮಸ್ಥರು ಸಾಯುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯವಹಿಸಿದೆ. ಅರಣ್ಯ ಸಚಿವರು ಘಟನಾ ಸ್ಥಳಕ್ಕೆ ಆಗಮಿಸಿ ನ್ಯಾಯಕೊಡಿಸಲಿ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ರಸ್ತೆ ತಡೆ ನಡೆಸಿರುವ ಗ್ರಾಮಸ್ಥರು ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಲಿ. ಅರಣ್ಯ ಅಧಿಕಾರಿಗಳು ಕಾಡಾನೆ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಪ್ರಾಣಿಗಳ ದಾಳಿಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು? ಶಾಲೆಗೆ ಹೋಗುವ ಮಕ್ಕಳು, ಕೂಲಿ ಕಾರ್ಮಿಕರು, ಇಡೀ ಗ್ರಾಮದ ಜನರು ಪ್ರತಿದಿನ ಜೀವಭಯದಲ್ಲಿ ಓದಾಡಬೇಕಾದ ಸ್ಥಿತಿ ಇದೆ? ಈ ರೀತಿಯಾದರೆ ದುಡಿಮೆಯನ್ನೇ ನಂಬಿ ಬದುಕುತ್ತಿರುವ ನಮ್ಮ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.