ಮಡಿಕೇರಿ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರ್ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಅದೃಷ್ಟವಶಾತ್ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬುಧವಾರ ರಾತ್ರಿ ಮಜ್ಜಿಗೆಹಳ್ಳ ಅರಣ್ಯ ಸಮೀಪ ಘಟನೆ ನಡೆದಿದೆ. ವಿರಾಜಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಕಾರ್ ಮೇಲೆ ತಿತಿಮತಿ ಸಮೀಪ ಕಾಡಾನೆ ದಾಳಿ ನಡೆಸಿ ಜಖಂಗೊಳಿಸಿದೆ. ಕಾಡಾನೆ ದಾಳಿಯಿಂದಾಗಿ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರ್ ನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿರಾಜಪೇಟೆ ತಾಲೂಕಿನ ಬೆಳಗುಂದ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುತ್ತಿರುವ ಅಶ್ವಕ್ ಕುಟುಂಬ ಸಮೇತ ತಿತಿಮತಿ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದರು. ರಸ್ತೆಯಲ್ಲಿ ಉಬ್ಬುತಗ್ಗುಗಳು ಇದ್ದ ಕಾರಣ ಚಾಲಕ ವಾಹನವನ್ನು ಸ್ಲೋ ಮಾಡಿದ್ದು, ಈ ವೇಳೆ ಏಕಾಏಕಿ ಕಾರ್ ಮೇಲೆ ದಾಳಿ ನಡೆಸಿದ ಕಾಡಾನೆ ಜಖಂಗೊಳಿಸಿ ತೆರಳಿದೆ. ವಿರಾಜಪೇಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅಶ್ವಕ್ ಕುಟುಂಬದವರು ಮನೆಗೆ ತೆರಳಿದ್ದಾರೆ.