ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಮಾಜಿ ಸಿಎಂ ದಿ.ದೇವರಾಜ ಅರಸು ಅವರ ಹೆಸರಿಡಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಜಿ ಸಿಎಂ ಡಿ.ದೇವರಾಜ ಅರಸು ಅವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಲೆಕ್ಟ್ರಾನಿಕ್ ಸಿಟಿಗೆ ಜಮೀನು ಕೊಟ್ಟಿದ್ದು ದೇವರಾಜ ಅರಸು ಹಾಗಾಗಿ ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ ಅರಸು ಹೆಸರಿಡಲು ಚಿಂತನೆ ನಡೆಸಿದ್ದೇವೆ. ಇದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಹೆಸರು ಬರಲು ದೇವರಾಜ ಅರಸು ಅವರ ಕೊಡುಗೆಯೂ ಇದೆ. ಗೇಣಿದಾರರಿಗೆ ಮಾಲೀಕತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದದ್ದು ಅರಸು. ವಿಧಾನಸಭಾ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಇದರ ಬಗ್ಗೆ ಹೋರಾಟ ಮಾಡಿದ್ದರು. ದೇವರಾಜ ಅರಸು ಅವರು ಹಲವು ಕಾರ್ಯಕ್ರಮ ಮಾಡಿದ್ದಾರೆ. ಅವರ ವಿಚಾರ ಇಟ್ಟುಕೊಂಡು ಬೆಳೆದವರು ಶಾಸಕರು, ಸಚಿವರು ಆಗಿದ್ದಾರೆ ಎಂದು ಹೇಳಿದರು.