ಬೆಂಗಳೂರು : ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ ಎಂದು ಮರುನಾಮಕರಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದದ ಬ್ಯಾಂಕ್ವೆಟ್ ಹಾಲ್ ನಲ್ಲಿ ದೇವರಾಜ ಅರಸು ಅವರ 108 ನೇ ಜನ್ಮದಿನಾಚರಣೆ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಲೆಕ್ಟ್ರಾನಿಕ್ ಸಿಟಿಗೆ ಮರು ನಾಮಕರಣ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಬೆಂಗಳೂರಿಗೆ ಸಿಲಿಕಾನ್ ಸಿಟಿ, ನಾಲ್ವಡ್ಜ್ ಸಿಟಿ ಎಂದು ಹೆಸರು ಬರಲು ಅರಸು ಅವರೂ ಸಹ ಕಾರಣರಾಗಿದ್ದಾರೆ ಎಂದರು.
ದೇವರಾಜ ಅರಸು ಅವರಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಛಲ ಇತ್ತು. ಹೀಗಾಗಿ ಮಲ ಹೊರುವ ಪದ್ಧತಿ ನಿಲ್ಲಿಸಿದರು. ಜೀತ ವ್ಯವಸ್ಥೆಗೆ ಮುಕ್ತಿ ಹಾಡಿದರು. ಹಿಂದುಳಿದ ಸಮುದಾಯಗಳ ಮೀಸಲಾತಿಗಾಗಿ ಹಾವನೂರು ಆಯೋಗ ರಚಿಸಿದರು. ಉಳುವವನೇ ಭೂ ಒಡೆಯ ಕಾನೂನು ಜಾರಿ ಮಾಡಿದರು ಎಂದು ಹೇಳಿದ್ದಾರೆ.