ಉಡುಪಿ: ವಿದ್ಯುತ್ ದರ ಏರಿಕೆ ನಿಯಮ ವಾಪಸ್ ಪಡೆಯುವ ಚಿಂತನೆ ಇದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿದ್ಯುತ್ ದರ ಏರಿಕೆಯಿಂದ ಜನರಿಗೆ ಹೊರೆಯಾಗುತ್ತಿದೆ ಎಂಬುದರ ಅರಿವಿದೆ. ಈ ಕುರಿತಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯವಾದರೆ ವಿದ್ಯುತ್ ದರ ಏರಿಕೆ ಯಾಮಾವಳಿ ಹಿಂಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ವಿದ್ಯುತ್ ದರ ಏರಿಕೆಗೆ ನಮ್ಮ ಸರ್ಕಾರ ಹೊಸ ನಿಯಮಾವಳಿ ರೂಪಿಸಿಲ್ಲ. 2014 ರಲ್ಲಿ ಕಲ್ಲಿದ್ದಲು ಬೆಲೆ ಹೊಂದಾಣಿಕೆಗೆ ರೂಪಿಸಲಾಗಿದ್ದ ನಿಯಮಾವಳಿಯೇ ಮುಂದುವರೆದಿದೆ ಎಂದು ಹೇಳಿದ್ದಾರೆ.
2014ರಲ್ಲಿ ರೂಪಿಸಿದ ನಿಯಮಾವಳಿಯೇ ಮುಂದುವರೆಯುತ್ತಿದೆ. ನಮ್ಮ ಸರ್ಕಾರ ಯಾವುದೇ ನಿಯಮವನ್ನು ಜಾರಿಗೆ ತಂದಿಲ್ಲ. ಈ ಬಗ್ಗೆ ಮರು ಚಿಂತನೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಮೂರು ತಿಂಗಳಿಗೊಮ್ಮೆ ದರ ಹೊಂದಾಣಿಕೆ ಮಾಡುವ ಬಗ್ಗೆ ಮರುಚಿಂತನೆ ಮಾಡಬೇಕಿದೆ. ರಾಜ್ಯದ ಜನತೆಗೆ ಹೊರೆಯಾಗುತ್ತಿದೆ ಎಂದು ನನಗೂ ಅನ್ನಿಸುತ್ತಿದೆ. ಕಾಂಗ್ರೆಸ್ ತಂದ ಈ ಪದ್ಧತಿಯಿಂದ ಜನರಿಗೆ ಹೊರೆಯಾಗುತ್ತಿದೆ. ಸಾಧಕ ಬಾಧಕಗಳ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸುತ್ತೇನೆ. ಅಗತ್ಯವಾದರೆ ಈ ನಿಯಮಾವಳಿ ಹಿಂದಕ್ಕೆ ಪಡೆಯಲು ಹಿಂಜರಿಯುವುದಿಲ್ಲ ಎಂದು ಉಡುಪಿಯಲ್ಲಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.