ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್ 1ರ ಸೋಮವಾರದಿಂದಲೇ ಆದೇಶ ಜಾರಿಯಾಗಲಿದೆ.
100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯೂನಿಟ್ ಗೆ 1.10 ರೂ. ಕಡಿಮೆಯಾಗಲಿದ್ದು 15 ವರ್ಷಗಳ ನಂತರ ರಾಜ್ಯದಲ್ಲಿ ವಿದ್ಯುತ್ ದರ ಕಡಿಮೆಯಾಗಲಿದೆ. ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಇದುವರೆಗೆ 0-100 ಯೂನಿಟ್ ವರೆಗಿನ ಹಾಗೂ 100ಕ್ಕಿಂತ ಹೆಚ್ಚು ಬಳಕೆಗೆ ಪ್ರತ್ಯೇಕವಾಗಿದ್ದ ಹೆಚ್.ಟಿ., ಗೃಹಬಳಕೆ ಶುಲ್ಕದ ಸ್ಲ್ಯಾಬ್ ರದ್ದುಪಡಿಸಲಾಗಿದೆ. ಎಷ್ಟೇ ಯೂನಿಟ್ ಬಳಕೆ ಮಾಡಿದರೂ ಪ್ರತಿ ಯೂನಿಟ್ ಗೆ 5.90 ರೂ. ನಂತೆ ದರ ನಿಗದಿಪಡಿಸಲಾಗಿದೆ. ಎಲ್ಲ ಎಸ್ಕಾಂಗಳಿಗೂ ಏಕರೂಪದ ಗೃಹ ಬಳಕೆ ವಿದ್ಯುತ್ ದರ ನಿಗದಿ ಮಾಡಲಾಗಿದೆ. ಇದರಿಂದ 100ಕ್ಕಿಂತ ಹೆಚ್ಚು ಯೂನಿಟ್ ಬಳಕೆ ಮಾಡುವವರು 7 ರೂ. ಬದಲಿಗೆ ಪ್ರತಿ ಯೂನಿಟ್ ಗೆ 5.90 ರೂ. ಮಾತ್ರ ಶುಲ್ಕ ಪಾವತಿಸಬೇಕಿದೆ. 15 ವರ್ಷದ ನಂತರ ದರ ಕಡಿಮೆಯಾಗಿದೆ.
100 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಇದುವರೆಗೆ 4.79 ನಿಗದಿ ಮಾಡಲಾಗಿತ್ತು. ಅದು ಕೂಡ 5.90 ರೂ.ಗೆ ಹೆಚ್ಚಳವಾಗಿದೆ. 100 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಪ್ರತಿ ಯೂನಿಟ್ ಗೆ 1.15 ಶುಲ್ಕ ಹೆಚ್ಚಳ ಹೊರೆ ಬೀಳಲಿದೆ. ಆದರೆ 100 ಯುನಿಟಿಗಿಂತ ಕಡಿಮೆ ವಿದ್ಯುತ್ ಬಳಸುವ ಶೇಕಡ 97 ರಷ್ಟು ವಿದ್ಯುತ್ ಬಳಕೆದಾರರಿಗೆ ಗೃಹಜ್ಯೋತಿ ಯೋಜನೆ ಜಾರಿಯಲ್ಲಿದೆ. ಅವರಿಗೆ ದರ ಏರಿಕೆಯ ಬಿಸಿ ತಟ್ಟುವುದಿಲ್ಲ ಎಂದು ಹೇಳಲಾಗಿದೆ.
ವಾಣಿಜ್ಯ ಬಳಕೆ ವಿದ್ಯುತ್ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ಯೂನಿಟ್ ಗೆ 7.75 ರೂ. ಶುಲ್ಕವನ್ನು 7.25 ರೂ.ಗೆ ಇಳಿಕೆ ಮಾಡಲಾಗಿದೆ. ವಾಣಿಜ್ಯ ಬಳಕೆ ವಿದ್ಯುತ್ ಸಂಪರ್ಕಗಳಿಗೆ ಡಿಮ್ಯಾಂಡ್ ಆಧಾರದ ಶುಲ್ಕ ನಿಗದಿ ಮಾಡಿದ್ದು, ಹಿಂದಿನ ಸ್ಲ್ಯಾಬ್ ರದ್ದು ಮಾಡಲಾಗಿದೆ. ಪ್ರತಿ ಯೂನಿಟ್ ಗೆ 8.5 ರೂ. ಇದ್ದ ಬೆಲೆಯನ್ನು 8 ರೂಪಾಯಿಗೆ ಮಾಡಲಾಗಿದ್ದು, ವಾಣಿಜ್ಯ ಬಳಕೆದಾರರಿಗೂ ಅನುಕೂಲವಾಗಲಿದೆ.