ಚಿಕ್ಕಬಳ್ಳಾಪುರ: ರಾಜ್ಯದ ರೈತರಿಗೆ ನಿರಂತರವಾಗಿ 7 ಗಂಟೆ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ನೀಡುವಲ್ಲಿ ಸರ್ಕಾರ ವಿಫಲವಾದರೆ ವಿದ್ಯುತ್ ಸರಬರಾಜು ಕಂಪನಿಗಳ ಕಚೇರಿಗಳಿಗೆ ಜಡಿದು ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಿಎಂ ಬಸಬರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ರೈತ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಸಮರ್ಪಕವಾಗಿ 7 ತಾಸು ವಿದ್ಯುತ್ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ, ಸರ್ಕಾರ ವಿದ್ಯುತ್ ಪೂರೈಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಇಂಧನ ಇಲಾಖೆಗೆ 10,000 ಕೋಟಿ ರೂ. ಅನುದಾನ ನೀಡಿತ್ತು. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಹಣವೇ ಇಲ್ಲವಾಗಿದೆ. ಕಲ್ಲಿದ್ದಲು ಖರೀದಿಸಲು ಅನುದಾನ ಬಿಡುಗಡೆ ಮಾಡಿಲ್ಲ ಎಂದು ದೂರಿದ್ದಾರೆ.
ರೈತರ ಪಂಪ್ ಸೆಟ್ ಗಳಿಗೆ ಕನಿಷ್ಠ ಎರಡು ಗಂಟೆ ವಿದ್ಯುತ್ ಕೂಡ ನೀಡುತ್ತಿಲ್ಲ. ಮೂರು ತಿಂಗಳಲ್ಲಿ ಎರಡು ಸಲ ವಿದ್ಯುತ್ತರ ಏರಿಕೆ ಮಾಡಲಾಗಿದೆ. 1.50 ಲಕ್ಷ ನೀರಾವರಿ ಪಂಪ್ಸೆಟ್ ಗಳು ಇದ್ದು, ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.