ತುಮಕೂರು: ಎರಡು ಇಲಾಖೆಗಳ ಜಟಾಪಟಿಯಿಂದ ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದೆ. ತುಮಕೂರಿನಲ್ಲಿ ಸಾರಿಗೆ ಇಲಾಖೆ ಮತ್ತು ಬೆಸ್ಕಾಂ ಅಧಿಕಾರಿಗಳ ನಡುವೆ ಕಿತ್ತಾಟ ನಡೆದಿದೆ.
1.16 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಆರ್.ಟಿ.ಒ. ಕಚೇರಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಮೂರು ತಿಂಗಳಿನಿಂದ ಆರ್.ಟಿ.ಒ. ಕಚೇರಿ ವಿದ್ಯುತ್ ಬಿಲ್ ಕಟ್ಟದೆ ಬಾಕಿ ಉಳಿಸಿಕೊಂಡಿದ್ದು, ನಿನ್ನೆ ಬೆಸ್ಕಾಂ ಅಧಿಕಾರಿಗಳು ಆರ್.ಟಿ.ಒ ಕಚೇರಿಯ ಕರೆಂಟ್ ಕಟ್ ಮಾಡಿದ್ದಾರೆ. ಸರ್ಕಾರದ ಆದೇಶದಂತೆ ಬೆಸ್ಕಾಂ ನಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದ್ದು, ಆರ್.ಟಿ.ಒ. ಅಧಿಕಾರಿಗಳು ಉದ್ದಟತನ ತೋರಿದ್ದಾರೆ.
ಬೆಸ್ಕಾಂನ ಸರ್ವಿಸ್ ವಾಹನವನ್ನು ಆರ್.ಟಿ.ಒ. ಅಧಿಕಾರಿಗಳು ಸೀಜ್ ಮಾಡಿ 2000 ರೂಪಾಯಿ ದಂಡ ವಿಧಿಸಿದ್ದಾರೆ. ವಾಹನದಲ್ಲಿ ಏಣಿಯನ್ನು ಕೊಂಡೊಯ್ಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಆರ್.ಟಿ.ಒ. ಅಧಿಕಾರಿಗಳು ದಂಡ ಹಾಕಿದ್ದಾರೆ.
ಆರ್.ಟಿ.ಒ. ಅಧಿಕಾರಿಗಳು ವಾಹನ ಸೀಜ್ ಮಾಡಿ ದಂಡ ಹಾಕಿದ್ದರಿಂದ ವಿದ್ಯುತ್ ಸಮಸ್ಯೆ ನಿವಾರಿಸಲು ಬೆಸ್ಕಾಂ ಸಿಬ್ಬಂದಿಗೆ ತೊಂದರೆಯಾಗಿದೆ. ಮಳೆಯಿಂದಾಗಿ ಹಲವೆಡೆ ವಿದ್ಯುತ್ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ಸರ್ವೀಸ್ ವಾಹನವಿಲ್ಲದ ಕಾರಣ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಿಂದೇಟು ಹಾಕುತ್ತಿದ್ದಾರೆ. ಆರ್.ಟಿ.ಒ. ಮತ್ತು ಬೆಸ್ಕಾಂ ನಡುವೆ ಕಿತ್ತಾಟದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ.