ಬೆಂಗಳೂರು: ಮೊದಲೇ ಬರದಿಂದ ಕಂಗಾಲಾದ ರೈತರಿಗೆ ವಿದ್ಯುತ್ ಲೋಡ್ ಶೆಡ್ಡಿಂಗ್ ಆತಂಕ ಎದುರಾಗಿದೆ. ಕೃಷಿ ಪಂಪ್ಸೆಟ್ ಗಳಿಗೆ ನೀಡುತ್ತಿದ್ದ 7 ಗಂಟೆ ವಿದ್ಯುತ್ ಅನ್ನು ದಿಢೀರ್ ಕಡಿತ ಮಾಡಲಾಗಿದೆ. 7 ಗಂಟೆ ಬದಲಿಗೆ 5 ಗಂಟೆ ವಿದ್ಯುತ್ ನೀಡಲಾಗುತ್ತಿದ್ದು, ಬೆಳೆ ಉಳಿಸಿಕೊಳ್ಳಲು ಅನ್ನದಾತರು ಪರದಾಟ ನಡೆಸಿದ್ದಾರೆ.
ಬೇಸಿಗೆ ಆರಂಭಕ್ಕೆ ಮೊದಲೇ ಲೋಡ್ ಶೆಡ್ಡಿಂಗ್ ಜಾರಿಗೆ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ. ಟಿಸಿ ರಿಪೇರಿ, ಫೀಡರ್ ಸಮಸ್ಯೆ, ತಾಂತ್ರಿಕ ನಿರ್ವಹಣೆ ಮೊದಲಾದ ಕಾರಣ ನೀಡಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಈಗಾಗಲೇ ಬೆಂಗಳೂರು ಗ್ರಾಮಾಂತರ, ದಾವಣಗೆರೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 2 ಗಂಟೆ ವಿದ್ಯುತ್ ಕಡಿತಗೊಳಿಸುತ್ತಿದ್ದು, ಉಳಿದ ಜಿಲ್ಲೆಗಳಲ್ಲೂ ಲೋಡ್ ಶೆಡ್ಡಿಂಗ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯದಲ್ಲಿ ಸುಮಾರು 32 ಲಕ್ಷ ಕೃಷಿ ಪಂಪ್ ಸೆಟ್ ಗಳಿದ್ದು, ಶೇಕಡ 35ರಷ್ಟು ವಿದ್ಯುತ್ ಬಳಕೆಯಾಗುತ್ತಿದೆ. ಮಳೆ ಕೊರತೆಯಿಂದ ಪಂಪ್ಸೆಟ್ ಅವಲಂಬನೆ ಹೆಚ್ಚಿದ್ದು, ಕೊಳವೆ ಬಾವಿ ಆಶ್ರಿತ ಪ್ರದೇಶಗಳಲ್ಲಿ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆ ವಿದ್ಯುತ್ ಪೂರೈಸಬೇಕು. ಹಗಲಿನಲ್ಲಿ 4 ಗಂಟೆ ವಿದ್ಯುತ್ ನೀಡಬೇಕಿದೆ. ಆದರೆ, 7 ಗಂಟೆ ಬದಲು 5 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಇನ್ನು ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಉತ್ಪಾದನೆ ಕೊರತೆ ಉಂಟಾಗಿದೆ. ಹೀಗಾಗಿ ಪವರ್ ಕಟ್ ಅನಿವಾರ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣಮುಚ್ಚಾಲೆ ಆಡುತ್ತಿದ್ದು, ತ್ರೀ ಫೇಸ್ ಬದಲಿಗೆ ಸಿಂಗಲ್ ಫೇಸ್ ನೀಡಲು ಒತ್ತು ನೀಡಲಾಗಿದೆ. ಶಾಖೋತ್ಪನ್ನ ಘಟಕಗಳು, ಪವನ ವಿದ್ಯುತ್, ಸೋಲಾರ್ ವಿದ್ಯುತ್ ಉತ್ಪಾದನೆ ತೀವ್ರ ಕುಸಿತ ಕಂಡಿದೆ. ಮಳೆ ಕೈಕೊಟ್ಟ ಕಾರಣ ಜಲ ವಿದ್ಯುತ್ ಕೊರತೆ ಎದುರಾಗಿದೆ. ಹೀಗಾಗಿ ವಿದ್ಯುತ್ ಉತ್ಪಾದನೆ ಕುಸಿತವಾಗಿ ಬೇಡಿಕೆ ಭಾರಿ ಹೆಚ್ಚಿದೆ ಎನ್ನಲಾಗಿದೆ.