ಬೆಂಗಳೂರು: ರೈತರ ತೋಟದ ಮನೆಗಳಿಗೆ ರಾತ್ರಿ ಹೊತ್ತಲ್ಲಿ ಬೆಳಕು ಯೋಜನೆಯಡಿ ಬೆಳಕಿನ ಭಾಗ್ಯ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ಯೋಜನೆ ಜಾರಿಗೊಳಿಸಲಾಗುವುದು.
ಗ್ರಾಮಾಂತರ ಪ್ರದೇಶದ ಬಡವರ ಮನೆಗಳಿಗೆ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತಿದ್ದು, ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದು, ತೋಟದ ಮನೆಗಳಿಗೆ ಕೂಡ ಬೆಳಕು ಕಲ್ಪಿಸಲಾಗುವುದು. ತೋಟದ ಮನೆಗಳಲ್ಲಿ ವಾಸವಾಗಿರುವ ನಿವಾಸಿಗಳಿಗೆ ರಾತ್ರಿ ವೇಳೆ ಹಾವು, ಪ್ರಾಣಿಗಳಿಂದ ತೋದರೆ, ಮಕ್ಕಳ ಶಿಕ್ಷಣಕ್ಕೆ ತೊಂದರೆ ಮೊದಲಾದ ಸಮಸ್ಯೆಗಳಿವೆ. ಇವುಗಳನ್ನು ಮನಗಂಡು ಬೆಳಕಿನ ಸೌಲಭ್ಯ ಕಲ್ಪಿಸಲಾಗುತ್ತದೆ.
ರಾಜ್ಯದಲ್ಲಿ ಸುಮಾರು ಒಂದು ಲಕ್ಷ ತೋಟದ ಮನೆಗಳಿರಬಹುದೆಂದು ಹೇಳಲಾಗಿದ್ದು, ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೊಸ ವರ್ಷದ ಕೊಡುಗೆಯಾಗಿ ತೋಟದ ಮನೆಗಳಿಗೆ ಬೆಳಕು ಸೌಲಭ್ಯ ನೀಡಲಾಗುವುದು. ತೋಟದ ವಿದ್ಯುತ್ ಪೂರೈಕೆ ಮಾಡಿದರೆ ನೀರಾವರಿ ಪಂಪ್ಸೆಟ್ ಗಳಿಗೆ ಬಳಸಲಾಗುತ್ತದೆ. ಈ ಕಾರಣದಿಂದ ವಿದ್ಯುತ್ ಸೌಲಭ್ಯ ಕಡಿಗೊಳಿಸಲಾಗಿದೆ. ಹೀಗಾಗಿ ತೋಟದ ಮನೆಗಳಿಗೆ ಪ್ರತ್ಯೇಕ ವಿದ್ಯುತ್ ಪೂರೈಕೆ ಮಾರ್ಗ, ತಗಲುವ ವೆಚ್ಚದ ಕುರಿತು ಯೋಜನಾ ವರದಿ, ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ವರದಿ ಕೈ ಸೇರುವ ಸಾಧ್ಯತೆಯಿದ್ದು, ಹೊಸ ವರ್ಷದ ಕೊಡುಗೆಯಾಗಿ ರೈತರ ತೋಟದ ಮನೆಗಳಿಗೆ ರಾತ್ರಿ ಹೊತ್ತಲ್ಲಿ ಬೆಳಗಿನ ಭಾಗ್ಯ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.