ಬೆಂಗಳೂರು: ಕುಟೀರ ಜ್ಯೋತಿ, ಭಾಗ್ಯಜ್ಯೋತಿ, ಅಮೃತ ಜ್ಯೋತಿ ಯೋಜನೆಗಳನ್ನು ಗೃಹಜ್ಯೋತಿ ಯೋಜನೆಯಡಿ ವಿಲೀನಗೊಳಿಸಲಾಗಿದೆ.
ಮೂರು ಯೋಜನೆಗಳ 50 ಲಕ್ಷ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಮಿತಿ ಹೆಚ್ಚಾಗಿದೆ. ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ಬಡವರಿಗೆ ಉಚಿತ ವಿದ್ಯುತ್ ಪೂರೈಕೆಗಾಗಿ ಜಾರಿಯಲ್ಲಿದ್ದ ಕುಟೀರ ಜ್ಯೋತಿ, ಭಾಗ್ಯಜ್ಯೋತಿ ಅಮೃತ ಜ್ಯೋತಿ ಯೋಜನೆಗಳನ್ನು ವಿಲೀನಗೊಳಿಸಲಾಗಿದೆ.
ಬಡವರಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆ ಅಡಿ 40 ಯೂನಿಟ್ ವರೆಗೆ ಉಚಿತ ವಿದ್ಯುತ್ ಬಳಸಲು ಅವಕಾಶವಿತ್ತು. ಅವರನ್ನು ಗೃಹಜ್ಯೋತಿ ಯೋಜನೆಯಡಿ ವಿಲೀನಗೊಳಿಸಲಾಗಿದ್ದು, ಸರಾಸರಿ ವಿದ್ಯುತ್ ಬಳಕೆ 53 ಯೂನಿಟ್ ಮತ್ತು ಶೇಕಡ 10 ರಷ್ಟು ಹೆಚ್ಚುವರಿ ಸೇರಿಸಿ 58 ಯೂನಿಟ್ ವರೆಗೆ ಉಚಿತ ವಿದ್ಯುತ್ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ.
ಕಳೆದ ವರ್ಷ ಜಾರಿಗೊಳಿಸಲಾಗಿದ್ದ ಅಮೃತಜ್ಯೋತಿ ಯೋಜನೆ ಅಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಿದ್ದು, ಗೃಹಜೋತಿ ಯೋಜನೆ ಅಡಿ ಸೇರ್ಪಡೆಯಾಗುವುದರಿಂದ ಶೇಕಡ 10ರಷ್ಟು ಅಂದರೆ 82 ಯೂನಿಟ್ ವರೆಗೆ ಉಚಿತ ವಿದ್ಯುತ್ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. 82 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆಗೆ ಶುಲ್ಕ ಪಾವತಿಸುವಂತಿಲ್ಲ. ಈ ಮೂರು ಯೋಜನೆಗಳಿಗೆ ಸರ್ಕಾರ ನಿಗದಿಪಡಿಸಿದ್ದ ಮಿತಿಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಹೆಚ್ಚುವರಿ ಬಳಕೆಗೆ ಶುಲ್ಕ ಪಾವತಿಸಬೇಕಿದೆ ಎಂದು ಹೇಳಲಾಗಿದೆ.