ಬೆಳಗಾವಿ: ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಕೈಗಾರಿಕೋದ್ಯಮಿಗಳು ಧರಣಿ ನಡೆಸಿದ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿಗಳ ಜೊತೆಗೆ ಹೆಸ್ಕಾಂ ಎಂಡಿ ಸಭೆ ನಡೆಸಿದ್ದಾರೆ.
ಬೆಳಗಾವಿಯ ಫೌಂಡರಿ ಕ್ಲಸ್ಟರ್ ಸಭಾಂಗಣದಲ್ಲಿ ಎಂಡಿ ಮೊಹಮ್ಮದ್ ರೋಷನ್ ಕೈಗಾರಿಕೋದ್ಯಮಿಗಳ ಜೊತೆಗೆ ಸಭೆ ನಡೆಸಿ ವಿದ್ಯುತ್ ದರ ಏರಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ವಿದ್ಯುತ್ ದರ ಹೆಚ್ಚಳದ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಇರುವ ಗೊಂದಲದ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನ ನಡೆಸಿದ್ದಾರೆ.
ಇಷ್ಟೊಂದು ವಿದ್ಯುತ್ ಬಿಲ್ ಕಟ್ಟಲು ಆಗುವುದಿಲ್ಲವೆಂದು ಕೈಗಾರಿಕೋದ್ಯಮಿಗಳು ಹೇಳಿದ್ದಾರೆ. ಬಿಲ್ ಏಕೆ ಹೆಚ್ಚಳ ಮಾಡಲಾಗಿದೆ ಎಂದು ಸಭೆಯಲ್ಲಿ ಹೆಸ್ಕಾಂ ಎಂಡಿ ಮಾಹಿತಿ ನೀಡಿದ್ದಾರೆ. ಇನ್ನೆರಡು ತಿಂಗಳಲ್ಲಿ ವಿದ್ಯುತ್ ದರ ಕಡಿಮೆಯಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ವಿದ್ಯುತ್ ದರ ಕಡಿಮೆ ಇದೆ. ಕರ್ನಾಟಕ ರಾಜ್ಯಕ್ಕಿಂತ ಮಹಾರಾಷ್ಟ್ರದಲ್ಲಿ ಹೆಚ್ಚಿನ ವಿದ್ಯುತ್ ದರ ಇದೆ ಎಂದು ಹೇಳಿದ್ದಾರೆ.
ನಾವು ನಷ್ಟ ಮಾಡಿಕೊಂಡು ನಿಮ್ಮನ್ನು ಲಾಭದಲ್ಲಿ ಇಡಬೇಕಾ ಎಂದು ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ರೋಹನ್ ಜವಳಿ ಪ್ರಶ್ನೆ ಮಾಡಿದ್ದಾರೆ. ಶೇಕಡ 40 ರಿಂದ 60 ರಷ್ಟು ವಿದ್ಯುತ್ ದರ ಹೆಚ್ಚಳವಾದರೆ ಬಿಲ್ ಪಾವತಿಸುವುದಾದರೂ ಹೇಗೆ? ಸಣ್ಣ ಕೈಗಾರಿಕೋದ್ಯಮಿಗಳಿಗೆ ತುಂಬಾ ಕಷ್ಟವಾಗುತ್ತಿದೆ ಎಂದು ರೋಹನ್ ಜವಳಿ ಹೇಳಿದ್ದಾರೆ.
ನಾವು ನಿಮ್ಮ ಜೊತೆ ಇರುತ್ತೇವೆ. ಆದರೆ ಇಷ್ಟು ಹೆಚ್ಚಳ ಮಾಡಿದರೆ ಬಿಲ್ ಕಟ್ಟುವುದು ಹೇಗೆ? ಪ್ರಶ್ನಿಸಿದ್ದು, ಎರಡು ತಿಂಗಳ ನಂತರ ಎಫ್.ಪಿ.ಪಿ.ಸಿ.ಎ. ಶುಲ್ಕ ಕಡಿಮೆಯಾಗುತ್ತದೆ. ನಾವು ನಿಮ್ಮ ಜೊತೆ ಪ್ರತ್ಯೇಕವಾಗಿ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಕೈಗಾರಿಕೋದ್ಯಮಿಗಳಿಗೆ ಹೆಸ್ಕಾಂ ಎಂಡಿ ಮೊಹಮ್ಮದ್ ರೋಷನ್ ಭರವಸೆ ನೀಡಿದ್ದಾರೆ.