
ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯು ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಗರಿಷ್ಠ ಬೇಡಿಕೆ ಅವಧಿಯಲ್ಲಿ 18,000 ಮೆಗಾ ವ್ಯಾಟ್ ದಾಟಿದೆ. ಏಪ್ರಿಲ್ ತಿಂಗಳಲ್ಲಿ ಬೇಡಿಕೆ 18,500 ಮೆಗಾ ವ್ಯಾಟ್ ಗೆ ತಲುಪುವ ಸಾಧ್ಯತೆ ಇದೆ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ನಂತರ ವಿದ್ಯುತ್ ಬೇಡಿಕೆಯಲ್ಲಿ ಗಣನೀಯ ಏರಿಕೆಯಾಗಿದೆ. ಈ ವರ್ಷ ಫೆಬ್ರವರಿಯಲ್ಲಿ ವಿದ್ಯುತ್ ಗರಿಷ್ಠ ಬೇಡಿಕೆ 18,350 ಮೆಗಾ ವ್ಯಾಟ್, ಮಾರ್ಚ್ ನಲ್ಲಿ 18,395 ಮೆಗಾ ವ್ಯಾಟ್ ಗೆ ಏರಿಕೆಯಾಗಿದೆ. ಸದ್ಯ ಗರಿಷ್ಠ ವಿದ್ಯುತ್ ಬಳಕೆ 357 ಮಿಲಿಯನ್ ಯೂನಿಟ್ ಇದೆ ಎಂದು ತಿಳಿಸಿದ್ದಾರೆ.
2024ರ ಏಪ್ರಿಲ್ ನಲ್ಲಿ ವಿದ್ಯುತ್ ಗರಿಷ್ಠ ಬೇಡಿಕೆ 16,985 ಮೆಗಾ ವ್ಯಾಟ್ ಇತ್ತು. ಈ ವರ್ಷ ಏಪ್ರಿಲ್ ಗೆ 18,294 ಮೆಗಾ ವ್ಯಾಟ್ ಗೆ ತಲುಪುವ ಅಂದಾಜಿದೆ. ವಿದ್ಯುತ್ ಬೇಡಿಕೆಯಲ್ಲಿ ಶೇಕಡ 8.1 ರಷ್ಟು ಹೆಚ್ಚಳವಾಗಿದೆ. ವಿದ್ಯುತ್ ಬೇಡಿಕೆ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಬೇಡಿಕೆಗೆ ಅನುಗುಣವಾಗಿ ವಿನಿಮಯ ಆಧಾರದಲ್ಲಿ ಉತ್ತರ ಪ್ರದೇಶದಿಂದ 100ರಿಂದ 1000 ಮೆಗಾ ವ್ಯಾಟ್ ವಿದ್ಯುತ್ ಪಡೆಯಲಾಗುತ್ತಿದೆ. ಅದೇ ರೀತಿ ಪಂಜಾಬ್ ನಿಂದ 200 ರಿಂದ 531 ಮೆಗಾ ವ್ಯಾಟ್ ವಿದ್ಯುತ್ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಕೂಡಗಿ NTPCಯಿಂದ 310 ಮೆಗಾ ವ್ಯಾಟ್ ಹೆಚ್ಚುವರಿ ವಿದ್ಯುತ್ ಪಡೆಯಲಾಗಿದೆ ಎಂದು ಹೇಳಿದ್ದಾರೆ.