ಬೆಂಗಳೂರು: ಇಂಧನ ಹೊಂದಾಣಿಕೆಗಾಗಿ ಆರು ತಿಂಗಳಲ್ಲಿ ಎರಡು ಬಾರಿ ವಿದ್ಯುತ್ ದರ ಹೆಚ್ಚಳ ಮಾಡಿದ್ದರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು, ವಿದ್ಯುತ್ ಬೆಲೆ ಇಳಿಕೆಗೆ ಇಂಧನ ಇಲಾಖೆ ಚಿಂತನೆ ನಡೆಸಿದೆ.
ಇಂಧನ ಹೊಂದಾಣಿಕೆಗಾಗಿ KERC ಕಳೆದ ಏಪ್ರಿಲ್ ನಲ್ಲಿ ಮತ್ತು ಸೆಪ್ಟೆಂಬರ್ ನಲ್ಲಿ ವಿದ್ಯುತ್ ದರ ಹೆಚ್ಚಿಸಿದೆ. ಪ್ರತಿ ಯೂನಿಟ್ ಗೆ 24 ಪೈಸೆಯಿಂದ 43 ಪೈಸೆವರೆಗೆ ವಿದ್ಯುತ್ ದರ ಹೆಚ್ಚಳ ಮಾಡಿರುವುದು ಗ್ರಾಹಕರಿಗೆ ಹೊರೆಯಾಗಿದೆ.
ಈ ಇಂಧನ ಹೊಂದಾಣಿಕೆ ಬೆಲೆಯನ್ನು ಸರ್ಕಾರವೇ ಭರಿಸಿದರೆ ಒಂದು ಸಾವಿರ ಕೋಟಿ ರೂ ವೆಚ್ಚವಾಗಲಿದ್ದು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚೆ ನಡೆಸುವುದಾಗಿ ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಪರಿಷ್ಕೃತ ಆದೇಶದ ಅನ್ವಯ ಹೆಚ್ಚಳವಾದ ವಿದ್ಯುತ್ ಬಿಲ್ ಗ್ರಾಹಕರಿಗೆ ತಲುಪಿದ ಹಿನ್ನೆಲೆಯಲ್ಲಿ ಪರಿಷ್ಕರಣೆ ಸಾಧ್ಯವಿಲ್ಲ. ಕೆಇಆರ್‌ಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು ಅವಕಾಶವಿಲ್ಲ. ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬಹುದು ಎನ್ನಲಾಗಿದ್ದು, ಸರ್ಕಾರದ ಮಟ್ಟದಲ್ಲಿ ದರ ಇಳಿಕೆ ಬಗ್ಗೆ ಯಾವ ಕ್ರಮಕೈಗೊಳ್ಳಬಹುದು ಎನ್ನುವುದನ್ನು ಕಾದು ನೋಡಬೇಕಿದೆ.