ಮಡಿಕೇರಿ: ಕೊಡಗು ಜಿಲೆಯಲ್ಲಿ ಕಾಫಿ ಮತ್ತು ಟೀ ಬೆಳೆಯುವ ಸಣ್ಣ ಮತ್ತು ಮಧ್ಯಮ ರೈತರ ಪಂಪ್ ಸೆಟ್‍ಗಳಿಗೆ 10 ಹೆಚ್.ಪಿ.ವರೆಗೆ ಉಚಿತ ವಿದ್ಯುತ್ ನೀಡುವಂತೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಮತ್ತು ಕೆ.ಜಿ. ಬೋಪಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಲ್ಲಿ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಜಲ ಪ್ರಳಯ ಉಂಟಾಗಿ ರೈತರು ಸಂಕಷ್ಟದಲ್ಲಿದ್ದು, ಅವರ ನೆರವಿಗೆ ನಿಲ್ಲಬೇಕಾಗಿದೆ. 2020 -21 ನೇ ಸಾಲಿನ ಆಯವ್ಯಯದಲ್ಲಿ ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಯುವ ರೈತರ ಪಂಪ್ ಸೆಟ್‍ಗಳಿಗೆ 10 ಹೆಚ್ .ಪಿ ವರೆಗೆ ಉಚಿತ ವಿದ್ಯುತ್ ನೀಡುವ ಭರವಸೆ ನಿಡಲಾಗಿತ್ತು.
ಆದರೆ, ಈ ಭರವಸೆಯಂತೆ ಈವರೆಗೆ ಅಗತ್ಯ ಆದೇಶ ಹೊರಡಿಸಿರುವುದಿಲ್ಲ. ಆದ್ದರಿಂದ, ತಾವು ದಯಮಾಡಿ ರಾಜ್ಯದ ಬೇರೆ ಜಿಲ್ಲೆಗಳ ರೈತರ ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿರುವ ರೀತಿಯಂತೆ ಕೊಡಗು ಜಿಲ್ಲೆಯಲ್ಲಿ ಕಾಫಿ ಮತ್ತು ಟೀ ಬೆಳೆಯುವ ಸಣ್ಣ ಮತ್ತು ಮಧ್ಯಮ ರೈತರಿಗೂ ಸಹ ಅವರು ಉಪಯೋಗಿಸುವ 10 ಹೆಚ್.ಪಿ.ವರೆಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಿ ಆದೇಶ ಹೊರಡಿಸುವಂತೆ ಸಂಬಂಧಪಟ್ಟವರಿಗೆ ಅಗತ್ಯ ಸೂಚನೆ ನೀಡಬೇಕೆಂದು ಮುಖ್ಯಮಂತ್ರಿ ಅವರಲ್ಲಿ ಶಾಸಕರು ಮನವಿ ಮಾಡಿದ್ದಾರೆ.