ಬೆಂಗಳೂರು: ರಾಜ್ಯದಲ್ಲಿ ತ್ರೀಫೇಸ್ ವಿದ್ಯುತ್ ಪೂರೈಕೆಯಲ್ಲಿ ಕೆಲವು ಸಮಸ್ಯೆಗಳಿದ್ದು, ಶೀಘ್ರವೇ ಸುಧಾರಣೆ ತರಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಟಿ. ವೆಂಕಟರಮಣಯ್ಯ ಅವರ ಪ್ರಶ್ನೆಗೆ ಇಂಧನ ಸಚಿವರ ಪರವಾಗಿ ಉತ್ತರ ನೀಡಿದ ಸಿ.ಸಿ. ಪಾಟೀಲ್ ಅವರು, ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಪೂರೈಕೆಯಲ್ಲಿ ಸಮಸ್ಯೆಗಳಿದ್ದು, ಇದನ್ನು ಸರಿಪಡಿಸಿಕೊಂಡು ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಾಮಾನ್ಯ ಅವಧಿಯಲ್ಲಿ 12,500 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ. ಬೇಡಿಕೆ ಅವಧಿಯಲ್ಲಿ 14,700 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗುತ್ತಿದ್ದು, ಅದಕ್ಕಿಂತಲೂ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಪೂರೈಕೆಯಲ್ಲಿ ಕೆಲವೊಂದು ಮಿತಿಗಳಿದ್ದರೂ, ರಾತ್ರಿ 3 ಗಂಟೆ, ಹಗಲು 4 ಗಂಟೆ ತ್ರೀಫೇಸ್ ವಿದ್ಯುತ್ ನೀಡಲಾಗುತ್ತಿದೆ ಎಂದು ತಿಳಿಸಿದ್ದು, ಇದಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಗಲಿನಲ್ಲಿ ಮಾತ್ರ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರಾತ್ರಿ ಪೂರೈಕೆ ಮಾಡುತ್ತಿರುವ ವಿದ್ಯುತ್ ನಲ್ಲಿ ಕೆಲ ಅವಧಿ ಕಡಿತ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ತೋಟಗಾರಿಕೆ ಬೆಳೆಗಳು ಹೆಚ್ಚಾಗಿರುವ ಕಡೆಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಜೆಡಿಎಸ್ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಕೆ. ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ಶಿವಾನಂದ ಪಾಟೀಲ್ ಹಾಗೂ ಶರತ್ ಬಚ್ಚೇಗೌಡ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.