ಬೆಂಗಳೂರು: ಕಳೆದ ಮೂರು ತಿಂಗಳಿಂದ ಕರೆಂಟ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದ ಕಂದಾಯ ಇಲಾಖೆ ಕಚೇರಿಯ ಕರೆಂಟ್ ಕಟ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೂರು ತಿಂಗಳಿಂದ ವಿದ್ಯುತ್ ಬಿಲ್ ಕಟ್ಟದೇ ಸುಮಾರು 1 ಲಕ್ಷ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಡುಮಲ್ಲೇಶ್ವರ ವಾರ್ಡ್ ನಂ.65ರ ನಾಡ ಕಚೇರಿ ಬಿಲ್ಡಿಂಗ್ ಗೆ ಬೆಸ್ಕಾಂ ಅಧಿಕಾರಿಗಳು ಪವರ್ ಕಟ್ ಮಾಡಿದ್ದಾರೆ.
ಒಂದೇ ಕಟ್ಟಡದಲ್ಲಿ ಬಿಬಿಎಂಪಿ ಕಂದಾಯ ಇಲಾಖೆ, ಗ್ರಂಥಾಲಯ, ನಾಡಕಚೇರಿ ಹಾಗೂ ಬಿಬಿಎಂಪಿ ಖಾತೆ ಬದಲಾವಣೆ ಹಾಗೂ ಜನನ, ಮರಣ ಪ್ರಮಾಣ ಪತ್ರ ಕಚೇರಿಗಳಿವೆ. ವಿದ್ಯುತ್ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಕೆಲಸಕ್ಕಾಗಿ ನಾಡಕಚೇರಿಗೆ ಬಂದ ಜನರು ವಾಪಾಸ್ ಆಗುವಂತಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.