ಮನೆಗೆ ವಿದ್ಯುತ್ ಸಂಪರ್ಕವೇ ಇಲ್ಲದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 36 ಸಾವಿರ ರೂ. ಬಿಲ್ ನೀಡಿದ್ದು, ಈ ವಿಷಯ ಕೇಳಿದ ವ್ಯಕ್ತಿ ಪ್ರಜ್ಞೆ ತಪ್ಪಿರುವ ಘಟನೆ ನಡೆದಿದೆ.
ಈ ಘಟನೆಯು ಪೂರ್ವಾಂಚಲ ಪ್ರದೇಶದ ಮಹಾರಾಜಗಂಜ್ ನಲ್ಲಿ ನಡೆದಿದ್ದು, ಅರ್ಜುನ್ ಪ್ರಸಾದ್ ಎಂಬ ವ್ಯಕ್ತಿಗೆ ವಿದ್ಯುತ್ ಇಲಾಖೆಯಿಂದ ಈ ರೀತಿಯ ಬಿಲ್ ಬಂದಿದೆ. ಇದನ್ನು ನೋಡಿದ ಅರ್ಜನ್ ದಿಕ್ಕು ತೋಚದಂತಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಅರ್ಜುನ್ ವಿಕಲಚೇತನನಾಗಿದ್ದು, ವಿದ್ಯುತ್ ಸಂಪರ್ಕಕ್ಕೆ ಮನವಿ ಮಾಡಿದ್ದರು. ಆದರೆ, ಸಂಪರ್ಕ ಕಲ್ಪಿಸಿರಲಿಲ್ಲ. ಬದಲಾಗಿ ಪ್ರತಿ ತಿಂಗಳು ವಿದ್ಯುತ್ ಬಿಲ್ ಬರುತ್ತಿತ್ತು. ಈ ಕುರಿತು ವಿದ್ಯುತ್ ಇಲಾಖೆ ಸಂಪರ್ಕಿಸಿ ಅರ್ಜುನ್ ಕೇಳಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಸದ್ಯ ಅಧಿಕಾರಿಗಳು ಏಕಾಏಕಿ ವಿದ್ಯುತ್ ಬಿಲ್ ನೀಡಿದ್ದು, ಅರ್ಜುನ್ ಗೆ ದಿಕ್ಕು ತೋಚದಾಗಿದೆ. ಅಧಿಕಾರಿಗಳ ಎಡವಟ್ಟಿನಿಂದಾಗಿ ಈ ಕುಟುಂಬ ಕಂಗಾಲಾಗಿದೆ. ಈ ಕುರಿತ ವರದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ, ವಿದ್ಯುತ್ ಇಲಾಖೆಯ ಅಧಿಕಾರಿ ಇ. ಹರಿಶಂಕರ್ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.