ಕೊಪ್ಪಳ: ವಿದ್ಯುತ್ ಬಿಲ್ ಕೇಳಿದ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಘಟನೆ ಕೊಪ್ಪಳ ತಾಲೂಕಿನ ಕುಕನಪಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಘಟನೆ ಖಂಡಿಸಿ ಜೆಸ್ಕಾಂ ಉಪ ವಿಭಾಗದ ಸಿಬ್ಬಂದಿ ಮುನಿರಾಬಾದ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಆರೋಪಿ ಚಂದ್ರಶೇಖರ ಹಿರೇಮಠ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಜೆಸ್ಕಾಂ ಸಿಬ್ಬಂದಿ ಮಂಜುನಾಥ್ ವಿದ್ಯುತ್ ಬಿಲ್ ಬಾಕಿ ಕೇಳಲು ಕುಕನಪಳ್ಳಿ ಗ್ರಾಮಕ್ಕೆ ಹೋಗಿದ್ದಾರೆ. 999 ರೂ. ಬಾಕಿ ಇದ್ದರೂ ಚಂದ್ರಶೇಖರ ಬಾಕಿ ಪಾವತಿಸಿರಲಿಲ್ಲ. ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದಾಗ ಚಂದ್ರಶೇಖರ ಹಲ್ಲೆ ಮಾಡಿದ್ದಾನೆ. ಮಂಜುನಾಥ್ ಅವರನ್ನು ಎಳೆದಾಡಿ ಕೆನ್ನೆಗೆ ಹೊಡೆದು ಚಪ್ಪಲಿಯಿಂದ ಥಳಿಸಿದ್ದಾನೆ. ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಬೆದರಿಸಿದ್ದಾನೆ. ಮತ್ತೊಬ್ಬ ಸಿಬ್ಬಂದಿ ಶಾಮಿದ್ ವಲಿ ಇದೆಲ್ಲವನ್ನು ವಿಡಿಯೋ ಮಾಡಿಕೊಂಡಿದ್ದು, ಆತನ ಮೇಲೆಯೂ ಚಂದ್ರಶೇಖರ ಹಲ್ಲೆಗೆ ಯತ್ನಿಸಿದ್ದಾನೆ.
ಸ್ಥಳೀಯರು ಗಲಾಟೆ ಬಿಡಿಸಿದ್ದಾರೆ. ವಿಷಯ ತಿಳಿದ ಜೆಸ್ಕಾಂ ಉಪ ವಿಭಾಗದ ಸಿಬ್ಬಂದಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು, ಮುನಿರಾಬಾದ್ ಠಾಣೆ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.