ಬೆಂಗಳೂರು: ವಿದ್ಯುತ್ ಬಿಲ್ ಬಂದ 30 ದಿನದೊಳಗೆ ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಹೆಚ್ಚುವರಿ ಭದ್ರತಾ ಠೇವಣಿ ಮೊತ್ತವನ್ನು ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿಯ ಪ್ರಕಾರ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಬೆಸ್ಕಾಂ ತಿಳಿಸಿದೆ.
ಸೆಪ್ಟೆಂಬರ್ 1ರಿಂದ ನಿಯಮ ಅನ್ವಯವಾಗಲಿದೆ. ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್ಮೆಂಟ್ ಗಳು, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸಬೇಕು. ಮೀಟರ್ ರೀಡಿಂಗ್ ಗೆ ಬರುವ ದಿನ ಪ್ರತಿ ತಿಂಗಳ ಮೊದಲ 15 ದಿನದಲ್ಲಿಯೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಇದುವರೆಗೆ ಪ್ರತಿ ತಿಂಗಳ ಮೊದಲ 15 ದಿನದಲ್ಲಿ ಮೀಟರ್ ಮಾಪನ ಮಾಡಿದ ನಂತರ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಲೈನ್ ಮ್ಯಾನ್ ಗಳೊಂದಿಗೆ ಮೀಟರ್ ರೀಡರ್ ಮತ್ತೆ ಅದೇ ಸ್ಥಳಕ್ಕೆ ತೆರಳುತ್ತಿದ್ದರು. ಇನ್ನು ಮುಂದೆ ಮೀಟರ್ ರೀಡರ್ ಜೊತೆಗೇ ಲೈನ್ ಮ್ಯಾನ್ ಗಳು ಬಂದು ವಿದ್ಯುತ್ ಬಾಕಿ ಬಿಲ್ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸರಬರಾಜು ಬಿಲ್ ನೀಡುವ ಸಮಯದಲ್ಲಿ ಸ್ಥಗಿತಗೊಳಿಸಲಿದ್ದಾರೆ.
ವಿದ್ಯುತ್ ಬಿಲ್ ಪಾವತಿಗೆ ಬಿಲ್ ನೀಡಿದ 15 ದಿನಗಳು ಯಾವುದೇ ಬಡ್ಡಿ ಇಲ್ಲದೆ ಕಾಲಾವಕಾಶ ಇರುತ್ತದೆ. ಅಂತಿಮ ದಿನಾಂಕದ ನಂತರವೂ ಬಡ್ಡಿ ಸಹಿತ ಪಾವತಿಗೆ 15 ದಿನ ಕಾಲಾವಕಾಶ ನೀಡಲಾಗುವುದು. ಗ್ರಾಹಕರು ಶುಲ್ಕ ಪಾವತಿಸದಿದ್ದಲ್ಲಿ ಮುಂದಿನ ಮೀಟರ್ ರೀಡಿಂಗ್ ದಿನವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ವಿದ್ಯುತ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100ರೂ. ಗಳಿಗಿಂತ ಅಧಿಕವಾಗಿದ್ದಲ್ಲಿ ಅಂತಹ ಸಂಪರ್ಕಗಳನ್ನು ಕೂಡ ಕಳಿತಗೊಳಿಸಲಾಗುವುದು ಎಂದು ಹೇಳಲಾಗಿದೆ.