ಚಿಕ್ಕಮಗಳೂರು: ಪ್ರತಿಬಾರಿ 5000 ರೂಪಾಯಿ ಬರುತ್ತಿದ್ದ ವಿದ್ಯುತ್ ಬಿಲ್ ಈ ಬಾರಿ ಬರೋಬ್ಬರಿ 10ಲಕ್ಷ ರೂಪಾಯಿ ಬಂದಿರುವುದನ್ನು ನೋಡಿ ಗ್ರಾಹಕರೇ ಶಾಕ್ ಆಗಿರುವ ಘಟನೆ ಚಿಕ್ಕಮಗಳೂರಿನ ಕಡೂರು ಪಟ್ಟಣದಲ್ಲಿ ನಡೆದಿದೆ.
ಮೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಗೆ ಕಡೂರಿನ ಉಳುಕಿನಕಲ್ಲು ಬಳಿಯ ಡಾಗಾ ಕಾಂಪ್ಲೆಕ್ಸ್ ನ ಮೋಹಿತ್ ಎಜೆನ್ಸಿ ಮಾಲೀಕರು ದಂಗಾಗಿದ್ದಾರೆ. ಪ್ರತಿ ತಿಂಗಳು 5 ಸಾವಿರ ರೂಪಾಯಿ ಬರುತ್ತಿದ್ದ ವಿದ್ಯುತ್ ಬಿಲ್ ಆಗಸ್ಟ್ 1ರಿಂದ ಸೆಪ್ಟೆಂಬರ್ 1ರವರೆಗಿನ ಬಿಲ್ 10 ಲಕ್ಷ ರುಪಾಯಿ ಬಂದಿದ್ದು, ಬಿಲ್ ನೋಡಿ ಅಂಗಡಿ ಮಾಲೀಕ ಮೋಹಿತ್ ಶಾಕ್ ಆಗಿದ್ದಾರೆ.
ಯಾವ ತಿಂಗಳೂ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಈಗ ಏಕಾಏಕಿ 10 ಲಕ್ಷಕ್ಕೂ ಅಧಿಕ ಬಂದಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ಅಧಿಕಾರಿಗಳಿಗೆ ಮೋಹಿತ್ ದೂರು ನೀಡಿದ್ದಾರಂತೆ. ಬಿಲ್ ಸರಿಪಡಿಸಿಕೊಡುವುದಾಗಿ ಹೇಳಿರುವ ಅಧಿಕಾರಿಗಳು ದೂರು ನೀಡಿ ನಾಲ್ಕು ದಿನಗಳಾದರೂ ಯಾವುದೇ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವೆಡೆ 500 ಬರುವ ಬಿಲ್ 15 ಸಾವಿರ ಬಂದಿದ್ದು, ಸಾಫ್ಟ್ ವೇರ್ ಪ್ರಾಬ್ಲಮ್ ನಿಂದ ಸಮಸ್ಯೆಯಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ ಎಂದು ಗ್ರಾಹಕರು ಕಿಡಿಕಾರಿದ್ದಾರೆ.