ಬೆಂಗಳೂರು: ಮುಂಗಾರು ಕೈಕೊಟ್ಟಿದ್ದು ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಬರಗಾಲದ ಸುಳಿಗೆ ಸಿಲುಕಿರುವ ರಾಜ್ಯಕ್ಕೆ ಈಗ ವಿದ್ಯುತ್ ಕೊರತೆ ಎದುರಾಗಿದೆ.
ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿದ್ದು, ಮೂರು ತಿಂಗಳಲ್ಲಿ ಬೇರೆಡೆಯಿಂದ 2500 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿ ಮಾಡಲಾಗಿದೆ. ಮುಂಗಾರು ಮಳೆ ಕೈಕೊಟ್ಟ ಕಾರಣ ಜಲ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಕಲ್ಲಿದ್ದಲು ದಾಸ್ತಾನು ಸಮಸ್ಯೆಯಿಂದ ಶಾಖೋತ್ಪನ್ನ ಮೂಲದ ವಿದ್ಯುತ್ ಉತ್ಪಾದನೆ ಮೇಲೆಯೂ ಪರಿಣಾಮ ಉಂಟಾಗಿದೆ.
ಬೇಡಿಕೆ ಅಂದಾಜಿಗಿಂತಲೂ ಹೆಚ್ಚಾಗಿರುವುದರಿಂದ ವಿದ್ಯುತ್ ಪೂರೈಕೆಯೇ ಸವಾಲಾಗಿದೆ. ಕೃಷಿ, ಕೈಗಾರಿಕೆ, ವಾಣಿಜ್ಯ, ಗೃಹ ವಲಯಗಳಲ್ಲಿ ವಿದ್ಯುತ್ ಬೇಡಿಕೆ ಭಾರಿ ಹೆಚ್ಚಾಗಿದೆ. ದಿನದ ಗರಿಷ್ಠ ಬೇಡಿಕೆ 13,500 ಮೆಗಾ ವ್ಯಾಟ್ ಗೆ ಹೆಚ್ಚಳ ಆಗಿದೆ. ಮೂರು ತಿಂಗಳಲ್ಲಿ 2,500 ದಶಲಕ್ಷ ಯೂನಿಟ್ ಖರೀದಿಸಲಾಗಿದೆ.
ಅಡಚಣೆ, ತಾಂತ್ರಿಕ ತೊಂದರೆಯ ನೆಪದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಮಳೆಗಾಲದಲ್ಲಿಯೇ ಈ ಪರಿಸ್ಥಿತಿ ಎದುರಾದರೆ ಬೇಸಿಗೆಯ ಪಾಡು ಹೇಳತೀರದಾಗುತ್ತದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.
ಕೃಷಿ ಪಂಪ್ಸೆಟ್ ಗಳಿಗೆ ಹಗಲು ವೇಳೆ 7 ಗಂಟೆ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡುವುದೇ ಸವಾಲಾಗಿದೆ. ಮಳೆ ಇಲ್ಲದೆ ಕಂಗಾಲಾಗಿ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ವಿದ್ಯುತ್ ಸಮಸ್ಯೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿದ್ಯುತ್ ಕೊರತೆ ನಿವಾರಿಸುವ ಉದ್ದೇಶದಿಂದ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.