ಕಳೆದ ನಾಲ್ಕು ತಿಂಗಳಲ್ಲಿ ದೆಹಲಿ, ಮುಂಬೈ ಮತ್ತು ಚೆನ್ನೈ ಸೇರಿದಂತೆ 9 ಮೆಗಾ ಸಿಟಿಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್(ಇವಿ) ಚಾರ್ಜಿಂಗ್ ಸ್ಟೇಷನ್‌ಗಳು ಎರಡೂವರೆ ಪಟ್ಟು ವಿಸ್ತರಿಸಿವೆ ಎಂದು ವಿದ್ಯುತ್ ಸಚಿವಾಲಯ ಶನಿವಾರ ತಿಳಿಸಿದೆ.
ಸರ್ಕಾರದ ಪ್ರಯತ್ನಗಳ ಪರಿಣಾಮವಾಗಿ ಕಳೆದ ನಾಲ್ಕು ತಿಂಗಳಲ್ಲಿ ಸೂರತ್, ಪುಣೆ, ಅಹಮದಾಬಾದ್, ಬೆಂಗಳೂರು, ಹೈದರಾಬಾದ್, ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ 2.5 ಪಟ್ಟು ಹೆಚ್ಚಳವಾಗಿದೆ ಎಂದು ವಿದ್ಯುತ್ ಸಚಿವಾಲಯದ ಹೇಳಿಕೆ ತಿಳಿಸಿದೆ. ಹೇಳಿಕೆಯ ಪ್ರಕಾರ, ಈ 9 ನಗರಗಳಲ್ಲಿ ಅಕ್ಟೋಬರ್ 2021 ಮತ್ತು ಜನವರಿ 2022 ರ ನಡುವೆ ಹೆಚ್ಚುವರಿ 678 ಸಾರ್ವಜನಿಕ EV ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಭಾರತದ 1,640 ಸಾರ್ವಜನಿಕ EV ಚಾರ್ಜರ್ ಗಳಲ್ಲಿ ಸುಮಾರು 940 ಈ ನಗರಗಳಲ್ಲಿವೆ. 4 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 9 ಮೆಗಾ ಸಿಟಿಗಳ ಮೇಲೆ ಸರ್ಕಾರ ತನ್ನ ಗಮನವನ್ನು ಆರಂಭದಲ್ಲಿ ಹೆಚ್ಚಿಸಿದೆ. ವಿದ್ಯುತ್ ಸಚಿವಾಲಯವು ಇತ್ತೀಚೆಗೆ ಜನವರಿ 14, 2022 ರಂದು EV ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ಪರಿಷ್ಕೃತ ಏಕೀಕೃತ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಭಾರತ ಸರ್ಕಾರ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಅಳವಡಿಕೆಯನ್ನು ಉತ್ತೇಜಿಸಲು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕ ಇವಿ ಚಾರ್ಜಿಂಗ್ ಮೂಲಸೌಕರ್ಯದಲ್ಲಿ ಗಣನೀಯ ವಿಸ್ತರಣೆಯೊಂದಿಗೆ, ಎಲೆಕ್ಟ್ರಿಕ್ ವಾಹನಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಪ್ರಾರಂಭಿಸಿವೆ ಎಂದು hELlAgide.
ಖಾಸಗಿ ಮತ್ತು ಸಾರ್ವಜನಿಕ ಏಜೆನ್ಸಿಗಳನ್ನು(BEE, EESL, PGCIL, NTPC, ಇತ್ಯಾದಿ) ಒಳಗೊಳ್ಳುವ ಮೂಲಕ ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯವನ್ನು ಹೆಚ್ಚಿಸಲು ಸರ್ಕಾರ 360 ಡಿಗ್ರಿ(ಎಲ್ಲಾ ರೀತಿ)ಪ್ರಯತ್ನಗಳನ್ನು ಮಾಡಿದೆ.
ಗ್ರಾಹಕರ ವಿಶ್ವಾಸವನ್ನು ಪಡೆಯಲು ಅನುಕೂಲಕರ ಚಾರ್ಜಿಂಗ್ ನೆಟ್ ವರ್ಕ್ ಗ್ರಿಡ್ ಅನ್ನು ಅಭಿವೃದ್ಧಿಪಡಿಸಲು ಅನೇಕ ಖಾಸಗಿ ಸಂಸ್ಥೆಗಳು ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಮುಂದೆ ಬಂದಿವೆ. ಈ ಮೆಗಾ ಸಿಟಿಗಳಲ್ಲಿ ಇವಿ ಮೂಲಸೌಕರ್ಯಗಳ ಸ್ಯಾಚುರೇಶನ್ ನಂತರ, ಹಂತ ಹಂತವಾಗಿ ಇತರ ನಗರಗಳಿಗೆ ವ್ಯಾಪ್ತಿಯನ್ನು ವಿಸ್ತರಿಸಲು ಸರ್ಕಾರ ಯೋಜಿಸಿದೆ.
ತೈಲ ಮಾರುಕಟ್ಟೆ ಕಂಪನಿಗಳು ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ 22,000 ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಿವೆ. 22,000 EV ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ 10,000 ಅನ್ನು IOCL(ಇಂಡಿಯನ್ ಆಯಿಲ್) ಸ್ಥಾಪಿಸುತ್ತದೆ, 7,000 ಅನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(BPCL) ಸ್ಥಾಪಿಸುತ್ತದೆ. ಮತ್ತು ಉಳಿದ 5,000 ಅನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(HPCL) ಸ್ಥಾಪಿಸುತ್ತದೆ.
IOCL ಈಗಾಗಲೇ 439 EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದೆ. ಮತ್ತು ಮುಂದಿನ ವರ್ಷದಲ್ಲಿ ಇನ್ನೂ 2,000 EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಯೋಜಿಸಿದೆ. BPCL 52 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದ್ದರೆ, HPCL 382 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದೆ. ಭಾರೀ ಕೈಗಾರಿಕೆ ಇಲಾಖೆಯು ಇತ್ತೀಚೆಗೆ 25 ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇ ಗಳಿಗಾಗಿ 1,576 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳನ್ನು ಮಂಜೂರು ಮಾಡಿದೆ, ಇದು ಈ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಪ್ರತಿ 25 ಕಿಮೀ ವ್ಯಾಪ್ತಿಯಲ್ಲಿರುತ್ತದೆ.