ಪೆಟ್ರೋಲ್-ಡಿಸೇಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಮೇಲೆ ಜನರಿಗೆ ಮೋಹ ಹೆಚ್ಚಾಗ್ತಿದೆ. ಆದ್ರೆ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗಿರುವ ಒಂದು ಚಿಂತೆ ಚಾರ್ಜಿಂಗ್. ಮನೆಯಿಂದ ಹೊರ ಬೀಳುವಾಗ ವಾಹನಕ್ಕೆ ಫುಲ್ ಚಾರ್ಜ್ ಇದೆಯೇ ಎಂಬುದನ್ನು ಪರೀಕ್ಷಿಸಬೇಕು. ಹಾಗೆ ದೂರದ ಪ್ರಯಾಣಕ್ಕೆ ಎಲೆಕ್ಟ್ರಿಕ್ ವಾಹನ ಯೋಗ್ಯವಲ್ಲ. ಪೆಟ್ರೋಲ್-ಡಿಸೇಲ್ ನಂತೆ ಚಾರ್ಜಿಂಗ್ ಪಾಯಿಂಟ್ ಗಳು ಮಧ್ಯೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಅನೇಕರು ಎಲೆಕ್ಟ್ರಿಕ್ ವಾಹನ ಖರೀದಿಗೆ ಹಿಂದೇಟು ಹಾಕ್ತಿದ್ದರು. ಅಂತವರಿಗೆ ಈಗ ಮಹತ್ವದ ಸುದ್ದಿಯೊಂದಿದೆ.
ಎಲೆಕ್ಟ್ರಿಕ್ ವಾಹನಗಳ ವಿಸ್ತರಣೆಯನ್ನು ಸಾಧ್ಯವಾದಷ್ಟು ಹೆಚ್ಚಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರ್ತಿದೆ. ಇದರಲ್ಲಿ ಈಗ ಚಾರ್ಜಿಂಗ್ ಸೌಲಭ್ಯ ಸೇರಿದೆ. ದೇಶದಾದ್ಯಂತ ಪೆಟ್ರೋಲ್ ಪಂಪ್‌ಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸೌಲಭ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಮುಂಬರುವ ಸಮಯದಲ್ಲಿ, ಎಲೆಕ್ಟ್ರಿಕ್ ಕಾರನ್ನು ಪೆಟ್ರೋಲ್ ಪಂಪ್‌ನಲ್ಲಿಯೇ ನೀವು ಚಾರ್ಜ್ ಮಾಡಬಹುದು.
ಭಾರತೀಯ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಇ-ವಾಹನಗಳಿಗಾಗಿ ಫಾಸ್ಟ್ ಚಾರ್ಜರ್ ಅಭಿವೃದ್ಧಿಪಡಿಸುತ್ತಿದೆ. 22 ಸಾವಿರ ಪೆಟ್ರೋಲ್ ಪಂಪ್‌ಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಸರ್ಕಾರ ಮಾತುಕತೆ ನಡೆಸುತ್ತಿದೆ. ಮಾಹಿತಿಯ ಪ್ರಕಾರ, ಭಾರೀ ಕೈಗಾರಿಕೆಗಳ ಸಚಿವಾಲಯವು ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದೊಂದಿಗೆ ದೇಶಾದ್ಯಂತ 22 ಸಾವಿರ ಪೆಟ್ರೋಲ್ ಪಂಪ್‌ಗಳಲ್ಲಿ ಇ-ವಾಹನ ಚಾರ್ಜರ್ ವ್ಯವಸ್ಥೆಯನ್ನು ಸಿದ್ಧಪಡಿಸಲು ಮಾತುಕತೆ ನಡೆಸುತ್ತಿದೆ. ಪ್ರತಿ ಹೆದ್ದಾರಿಯಲ್ಲಿ 25 ಕಿಲೋಮೀಟರ್ ದೂರದಲ್ಲಿ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ನಿರ್ಧರಿಸಲಾಗಿದೆ.
ಪುಣೆ ಮೂಲದ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯು, ಈಗಾಗಲೇ ಚಾರ್ಜರ್‌ನ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಫಾಸ್ಟ್ ಚಾರ್ಜರ್ ಸಿದ್ಧವಾಗಲಿದೆ.