ಧಾರವಾಡ: ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಪೋಟಗೊಂಡು ಮನೆಗೆ ಬೆಂಕಿ ತಗಲಿ ಸುಟ್ಟು ಕರಕಲಾಗಿದೆ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಬಿ. ಗುಡಿಹಾಳ ಗ್ರಾಮದ ಬಸಯ್ಯ ಹಿರೇಮಠ ಅವರ ಮನೆಯಲ್ಲಿ ಘಟನೆ ನಡೆದಿದೆ.
ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜಿಂಗ್ ಮಾಡುವಾಗ ಬ್ಯಾಟರಿ ಸ್ಪೋಟಗೊಂಡು ಬೈಕ್ ಸುಟ್ಟು ಕರಕಲಾಗಿದೆ. ಸ್ಕೂಟರ್ ಗೆ ಹೊತ್ತಿಕೊಂಡ ಬೆಂಕಿಯ ಜ್ವಾಲೆ ಮನೆಗೆ ವ್ಯಾಪಿಸಿದೆ. ಇದರಿಂದಾಗಿ ಮನೆಯಲ್ಲಿದ್ದ ವಸ್ತುಗಳು ಹಾನಿಯಾಗಿವೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಮನೆಯಲ್ಲಿದ್ದವರು ಹೊರಗೆ ಓಡಿ ಬಂದು ಪಾರಾಗಿದ್ದಾರೆ. ಸ್ಥಳಕ್ಕೆ ಕಲಘಟಗಿ ಠಾಣೆ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.