ಬೆಂಗಳೂರು : ರಾಜ್ಯದಲ್ಲಿ ತೀವ್ರ ವಿದ್ಯುತ್ ಅಭಾವ ಸೃಷ್ಟಿಯಾಗಿರುವ ಬೆನ್ನಲ್ಲೇ ಇಂಧನ ಇಲಾಖೆಯು ರಾಜ್ಯಾದ್ಯಂತ ಅನಧಿಕೃತ ಲೋಡ್ ಶೆಡ್ಡಿಂಗ್ ಮುಂದುವರೆಸಿದೆ.
ರಾಜ್ಯದ ನಿತ್ಯದ ವಿದ್ಯುತ್ ಬೇಡಿಕೆ 17 ಸಾವಿರ ಮೆಗಾ ವ್ಯಾಟ್ ಗೆ ತಲುಪಿದ ಪರಿಣಾಮ ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಶುರುವಾಗಿದೆ. ವಿದ್ಯುತ್ ಬೇಡಿಕೆ ಹೆಚ್ಚಳ ಹಾಗೂ ಉತ್ಪಾದನೆ ಕೊರತೆಯಿಂದಾಗಿ ಪ್ರತಿನಿತ್ಯ ಗ್ರಿಡ್ ನಿಂದ ನಾಲ್ಕು ಸಾವಿರದಿಂದ 6 ಸಾವಿರ ಮೆಗಾ ವ್ಯಾಟ್ ನಷ್ಟು ಕಡಿಮೆ ವಿದ್ಯುತ್ ಪಡೆಯುವಂತೆ ಕೆಪಿಟಿಸಿಎಲ್ ಎಸ್ಕಾಂಗಳಿಗೆ ಸೂಚನೆ ನೀಡಿದೆ.
ರಾಜ್ಯದ ರೈತ ಸಮುದಾಯಕ್ಕೆ ಇಂಧನ ಇಲಾಖೆ ಶಾಕ್ ನೀಡಿದ್ದು, ಕೃಷಿ ಪಂಪ್ ಸೆಟ್ ಗಳಿಗೆ ನಿತ್ಯ 7 ಗಂಟೆ ಪೂರೈಕೆಯಾಗಬೇಕಿದ್ದ ವಿದ್ಯುತ್ 3 ಗಂಟೆಯೂ ಪೂರೈಕೆ ಆಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಸಂಜೆ 6 ಗಂಟೆಯಿಂದ 8 ಗಂಟೆವರೆಗೆ ನಿತ್ಯ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಜಾರಿ ಮಾಡಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.