
ಹಾವೇರಿ: ಹಾನಗಲ್ ತಾಲೂಕಿನ ಹಿರೇಹಲ್ಲಾಳ ಗ್ರಾಮದಲ್ಲಿ ಸೋಮವಾರ ಲೈನ್ ಮನ್ ಮಾತು ಕೇಳಿ ವಿದ್ಯುತ್ ಕಂಬ ಹತ್ತಿದ ರೈತರೊಬ್ಬರು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
ಕಾಶಿನಾಥ್ ಗುಡ್ಡಪ್ಪ ಕಮ್ಮಾರ(32) ಮೃತಪಟ್ಟ ರೈತ. ಲೈನ್ ಮನ್ ಆಗಿರುವ ಹೆಸ್ಕಾಂ ನೌಕರ ತಿರುಪತಿ ಗ್ರಾಮದಲ್ಲಿ ಸೋಮವಾರ ವಿದ್ಯುತ್ ಸಮಸ್ಯೆ ಪರಿಹರಿಸಲು ಬಂದಿದ್ದಾರೆ. ಅವರು ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡಬೇಕಿತ್ತು, ಅದರ ಬದಲು ರೈತ ಕಾಶಿನಾಥ್ ಅವರನ್ನು ಕಂಬ ಹತ್ತುವಂತೆ ಮಾಡಿದ್ದಾರೆ.
ಈ ವೇಳೆ ವಿದ್ಯುತ್ ಪ್ರವಹಿಸಿ ರೈತ ಕಾಶೀನಾಥ್ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ನಂತರ ಸ್ಥಳದಿಂದ ತಿರುಪತಿ ಪರಾರಿಯಾಗಿದ್ದಾರೆ. ಆಕ್ರೋಶಕೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಅಮಾಯಕ ರೈತನ ಸಾವಿಗೆ ಕಾರಣನಾಗಿರುವ ತಿರುಪತಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಹಿಂದೆಯೂ ತಿರುಪತಿ ಇದೇ ರೀತಿ ಅಮಾಯಕರೊಬ್ಬರ ಸಾವಿಗೆ ಕಾರಣನಾಗಿ ಅಮಾನತುಗೊಂಡಿದ್ದ. ಈಗ ಮತ್ತೊಂದು ಜೀವಹಾನಿಗೆ ಕಾರಣನಾಗಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.