ರಾಯಚೂರು/ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟರೂ ಏಪ್ರಿಲ್ 5ರಿಂದ 7ರವರೆಗೆ ಸಕಾರಣವಿಲ್ಲದೆ ಗೈರುಯ ಹಾಜರಾಗಿ ತಮ್ಮ ಬದಲು ಬೇರೊಬ್ಬರನ್ನು ಕರ್ತವ್ಯಕ್ಕೆ ಕಳುಹಿಸಿದ ಆರೋಪದಲ್ಲಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ರಾಯಚೂರು ಜಿಲ್ಲೆಯ ಮುದಗಲ್ ಹೋಬಳಿಯ ಫ್ಲೈಯಿಂಗ್ ಸ್ಕ್ವಾಡ್ ತಂಡದ ರಮೇಶ್ ರಾಥೋಡ್ ಅಮಾನತುಗೊಂಡವರು. ಜಿಲ್ಲಾ ಚುನಾವಣಾ ಅಧಿಕಾರಿ ಎಲ್. ಚಂದ್ರಶೇಖರ್ ನಾಯಕ ಅವರು ರಮೇಶ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹಿರಿಯ ಅಧಿಕಾರಿಗಳ ಪರಿಶೀಲನೆ ಸಂದರ್ಭದಲ್ಲಿ ಜಿಪಿಎಸ್ ಫೋಟೋ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಕರ್ತವ್ಯಕ್ಕೆ ಗೈರು ಹಾಜರಾಗಿದ್ದಲ್ಲದೆ ತಮ್ಮ ಬದಲು ಬೇರೊಬ್ಬರನ್ನು ಕರ್ತವ್ಯ ಕಳುಹಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅವರನ್ನು ಅಮಾನತು ಮಾಡಲಾಗಿದೆ.
ಶಿಕ್ಷಕ ಅಮಾನತು:
ದಾವಣಗೆರೆಯಲ್ಲಿ ಚುನಾವಣಾ ಮತಗಟ್ಟೆ ಮಟ್ಟದ ಅಧಿಕಾರಿ ಸಿಬ್ಬಂದಿಗಳಿಗೆ ಆಯೋಜಿಸಿದ್ದ ತರಬೇತಿಗೆ ಗೈರು ಹಾಜರಾಗಿದ್ದ ಬಗ್ಗೆ ಪ್ರಶ್ನಿಸಿದ್ದಕ್ಕೆ ತಹಶೀಲ್ದಾರ್ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಚನ್ನಗಿರಿ ಎಸ್.ಕೆ.ಎಂ.ಎಸ್. ಮಿಲ್ಲತ್ ಪ್ರೌಢಶಾಲೆ ಸಹ ಶಿಕ್ಷಕ ಸೈಯ್ಯದ್ ಸುಲ್ತಾನ್ ಅಹಮದ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.