ಧಾರವಾಡ: ವಿಧಾನಸಭೆ ಚುನಾವಾಣೆ ಹಿನ್ನೆಲೆಯಲ್ಲಿ ನಿಯೋಜಿತ ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಕಾಳಜಿ ತೊರಿದ ಮತ್ತು ಚುನಾವಣಾ ಕರ್ತವ್ಯಲೋಪ ಮಾಡಿರುವ ಕಲಘಟಗಿ ತಹಶೀಲ್ದಾರ ಕಚೇರಿಯಲ್ಲಿ ಇರುವ ಗ್ರಾಮ ಆಡಳಿತಾಧಿಕಾರಿ ಸುನೀಲ.ಇ.ಡಿ. ಅವರನ್ನು ತಕ್ಷಣಕ್ಕೆ ಜಾರಿ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ.
ಚುನಾವಣಾ ಕೆಲಸಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯವಹಿಸಿ ಕರ್ತವ್ಯಲೋಪ ಮಾಡುವುದಲ್ಲದೆ ಚುನಾವಣಾ ಕಾರ್ಯಕ್ಕೆ ತೊಂದರೆಯುಂಟುಮಾಡಿ, ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 134ರ ಉಲ್ಲಂಘನೆ ಮಾಡಿದ್ದರಿಂದ ಸುನೀಲ ಇ.ಡಿ. ಅವರನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1957ರ ನಿಯಮ ಪ್ರಕಾರ ಸದರಿ ಅವರ ಮೇಲಿನ ಇಲಾಖೆ ವಿಚಾರಣಾ ಬಾಕಿ ಇರಿಸಿ ಸರ್ಕಾರಿ ಸೇವೆಯಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ಅಮಾನತ್ತು ಆಗಿರುವ ಗ್ರಾಮ ಆಡಳಿತ ಅಧಿಕಾರಿ ಸುನೀಲ ಇ.ಡಿ. ಅವರ ಲೀನ್ ಅನ್ನು ತಹಶೀಲ್ದಾರ ಕಲಘಟಗಿ ಕಾರ್ಯಾಲಯದಿಂದ ತಹಶೀಲ್ದಾರ ನವಲಗುಂದ ಇವರ ಕಾರ್ಯ ವ್ಯಾಪ್ತಿಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಸಾಜಾಕ್ಕೆ ವರ್ಗಾಯಿಸಿದೆ.
ಅಮಾನತ್ತು ಅವಧಿಯಲ್ಲಿ ಆಪಾದಿತ ನೌಕರನು ತಹಶೀಲ್ದಾರ ನವಲಗುಂದ ಇವರ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡತಕ್ಕದಲ್ಲ ಮತ್ತು ನೌಕರನು ನಿಯಮಾನುಸಾರ ಜೀವನಾಂಶ ಭತ್ಯೆ ಪಡೆಯಲು ಅರ್ಹನಿರುತ್ತಾನೆ ಎಂದು ಜಿಲ್ಲಾಧಿಕಾರಿಗಳು ಆದೇಶಲ್ಲಿ ತಿಳಿಸಿದ್ದಾರೆ.