ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇಕಡ 100ರಷ್ಟು ಮತದಾನವಾಗಿದೆ. ಈ ಗ್ರಾಮದ ಜನ ಅಧಿಕಾರಿಗಳಿಗೆ ನೀಡಿದ ಮಾತಿನಂತೆ ಶೇಕಡ 100ರಷ್ಟು ಮತದಾನ ಮಾಡಿದ್ದಾರೆ. ಅಧಿಕಾರಿಗಳು ನೀಡಿದ ಭರವಸೆಯಂತೆ ಗ್ರಾಮಕ್ಕೆ ಕನಿಷ್ಠ ಮೂಲ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಬಾಂಜಾರ ಮಲೆಗೆ ರಸ್ತೆ, ಸೇತುವೆ, ಮೊಬೈಲ್ ನೆಟ್ವರ್ಕ್ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ. ಪಶ್ಚಿಮ ಘಟ್ಟ ಮಧ್ಯದ ಚಾರ್ಮಾಡಿ ಸಮೀಪದ ಕುಗ್ರಾಮವಾದ ಬಾಂಜಾರ ಮಲೆ ಗ್ರಾಮದವರು ಮತದಾನಕ್ಕಾಗಿ 45 ಕಿ.ಮೀ ನಡೆದುಕೊಂಡು ಬರಬೇಕಿತ್ತು. 2014ರಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಅಂದಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮತಗಟ್ಟೆ ಸ್ಥಾಪಿಸಲು ಕ್ರಮ ಕೈಗೊಂಡಿದ್ದರು.
ನಂತರದಲ್ಲಿ ಮೂಲಸೌಕರ್ಯಕ್ಕೆ ಒತ್ತಾಯಿಸಿ ಗ್ರಾಮಸ್ಥರು ಎರಡು ಸಲ ಚುನಾವಣೆ ಬಹಿಷ್ಕರಿಸಿದ್ದರು. 2019ರ ಚುನಾವಣೆಯಲ್ಲಿ ಒಟ್ಟು 106 ಮತದಾರರಲ್ಲಿ 105 ಮಂದಿ ಮತದಾನ ಮಾಡಿದ್ದರು. ಈ ಬಾರಿ ಗ್ರಾಮದ ಎಲ್ಲಾ ಮತದಾರರು ಮತದಾನ ಮಾಡುವ ಮೂಲಕ ಕೊಟ್ಟ ಮಾತನ್ನು ಈಡೇರಿಸಿದ್ದಾರೆ. ಗ್ರಾಮದ ಯುವಕರು, ಜನ ಸೇರಿಕೊಂಡು ಅನಾರೋಗ್ಯ ಇತರೆ ಕಾರಣದಿಂದ ಊರಿನಿಂದ ಹೊರಗಿದ್ದವರನ್ನು ಕರೆಸಿ ಶೇಕಡ 100ರಷ್ಟು ಮತದಾನವಾಗಲು ಕಾರಣರಾಗಿದ್ದಾರೆ.