ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ನಿಂದ ಪಿಜಿಆರ್ ಸಿಂಧ್ಯಾ ಅವರನ್ನು ಕಣಕ್ಕಿಳಿಸಲು ಚರ್ಚೆ ನಡೆದಿದೆ.
ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತದಾರರು ಹೆಚ್ಚಾಗಿರುವ ಪದ್ಮನಾಭನಗರ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ಶೋಧ ಕಾರ್ಯ ನಡೆಸಿ ಕೊನೆಗೆ ಪಿಜಿಆರ್ ಸಿಂಧ್ಯಾ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ.
ಪದ್ಮನಾಭನಗರದಲ್ಲಿ ಆರ್. ಅಶೋಕ್ ವಿರುದ್ಧ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿಯ ಕೊರತೆ ಇರುವ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ ಸೂಕ್ತ ಅಭ್ಯರ್ಥಿ ಒಬ್ಬರನ್ನು ಬೆಳೆಸಲು ಸಾಧ್ಯವಾಗದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ನಂತರ ಪದ್ಮನಾಭನಗರದಲ್ಲಿ ಆರ್. ಅಶೋಕ್ ವಿರುದ್ಧ ಸಿಂಧ್ಯಾ ಅವರನ್ನು ಕಣಕ್ಕಿಳಿಸಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸಮಾಲೋಚನೆ ನಡೆಸಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.