ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳನ್ನು ವಾಪಸ್ ಪಡೆದುಕೊಳ್ಳಲು ಬುಧವಾರ ಕೊನೆಯ ದಿನವಾಗಿದೆ.
ರಾಜ್ಯದ ಗಮನ ಸೆಳೆದ ಚನ್ನಪಟ್ಟಣ, ಶಿಗ್ಗಾವಿ, ಸಂಡೂರಿನಲ್ಲಿ ಉಪಚುನಾವಣೆ ನಡೆಯುತ್ತಿದ್ದು, ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ನಂತರ ಚುನಾವಣಾ ಕಣದ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಪ್ರಚಾರದ ಭರಾಟೆ ಹೆಚ್ಚಾಗಲಿದೆ.
ಆಡಳಿತಾರೂಢ ಕಾಂಗ್ರೆಸ್ ಮತ್ತು ಪಕ್ಷಗಳಾದ ಬಿಜೆಪಿ, ಜೆಡಿಎಸ್ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಗೆಲುವಿನ ಕಾರ್ಯ ತಂತ್ರ ರೂಪಿಸಿ ಪ್ರಚಾರಕ್ಕೆ ಘಟಾನುಘಟಿ ನಾಯಕರನ್ನು ನಿಯೋಜಿಸಲಾಗಿದೆ.
ಶಿಗ್ಗಾವಿಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಜ್ಜಂಪೀರ್ ಖಾದ್ರಿ ಅವರು ನಾಮಪತ್ರ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮಾತಿಗೆ ಒಪ್ಪಿ ಅವರ ಮೇಲೆ ಭರವಸೆ ಇಟ್ಟು ನಾಮಪತ್ರವನ್ನು ವಾಪಸ್ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.