ಬೆಂಗಳೂರು: ಅವಧಿ ಮುಗಿದ ರಾಜ್ಯದ 6000 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಮೂರು ವಾರದೊಳಗೆ ವೇಳಾ ಪಟ್ಟಿ ಪ್ರಕಟಿಸಲು ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಮೊದಲಾದವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಮತ್ತು ನ್ಯಾಯಮೂರ್ತಿ ಅಶೋಕ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ಚುನಾವಣೆ ವೇಳಾಪಟ್ಟಿಯನ್ನು ಅಂತಿಮಗೊಳಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ಮೂರು ವಾರದೊಳಗೆ ವೇಳಾಪಟ್ಟಿ ಪ್ರಕಟಿಸಲು ನಿರ್ದೇಶನ ನೀಡಲಾಗಿದೆ. ಚುನಾವಣೆ ಘೋಷಣೆ ಬಗ್ಗೆ ಮೂರು ವಾರದೊಳಗೆ ಆಯೋಗ ತೀರ್ಮಾನ ಕೈಗೊಳ್ಳಬೇಕು. ಚುನಾವಣೆಗೆ ಹಣಕಾಸಿನ ಅಗತ್ಯವಿದ್ದರೆ ರಾಜ್ಯಪಾಲರನ್ನು ಸಂಪರ್ಕಿಸಬಹುದು ಎಂದು ಹೈಕೋರ್ಟ್ ಸೂಚಿಸಿದೆ.
ಅಸಾಧಾರಣ ಸಂದರ್ಭದಲ್ಲಿ ಮಾತ್ರ ಚುನಾವಣೆಯನ್ನು ಮುಂದೂಡಬಹುದಾಗಿದ್ದು ಅದನ್ನು ಚುನಾವಣಾ ಆಯೋಗವೇ ತೀರ್ಮಾನಿಸಬೇಕು. ಚುನಾವಣೆ ಮುಂದೂಡಿಕೆ ಸರ್ಕಾರ ನಿರ್ಧರಿಸುವುದಲ್ಲ ಎಂದು ಹೇಳಲಾಗಿದೆ.