ಬೆಂಗಳೂರು: ಚುನಾವಣೆಗೆ ಅಭ್ಯರ್ಥಿ ನಾಮಪತ್ರದೊಂದಿಗೆ ಪ್ರಮಾಣ ಪತ್ರ ಸಲ್ಲಿಸುವಾಗ ತಮ್ಮ ವಿರುದ್ಧ ದಾಖಲಾದ ಕ್ರಿಮಿನಲ್ ಕೇಸ್ ಗಳ ಪೈಕಿ ಖುಲಾಸೆ ಮತ್ತು ರದ್ದಾದ ಪ್ರಕರಣಗಳ ಮಾಹಿತಿಯನ್ನು ಸಹ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.
ಕ್ರಿಮಿನಲ್ ಪ್ರಕರಣದಲ್ಲಿ ಖುಲಾಸೆಗೊಂಡ ಮಾಹಿತಿ ಮುಚ್ಚಿಟ್ಟಿದ್ದ ಹಿನ್ನೆಲೆಯಲ್ಲಿ ತಮ್ಮ ಸದಸ್ಯತ್ವ ಅನರ್ಹಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಾಗಲಕೋಟೆ ಜಿಲ್ಲೆ ಬೇವೂರು ಗ್ರಾಮ ಪಂಚಾಯಿತಿ ಸದಸ್ಯ ಮುದಿಯಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ನಾಮಪತ್ರದೊಂದಿಗೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ಅಭ್ಯರ್ಥಿ ತನ್ನ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ವಿವರ ನೀಡಿದರೆ ಸಾಲದು. ಅದರೊಂದಿಗೆ ತಮ್ಮ ವಿರುದ್ಧ ದಾಖಲಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳು, ವಿಚಾರಣೆಗೆ ಬಾಕಿ ಇರುವ, ರದ್ದಾದ, ಬಿಡುಗಡೆ ಅಥವಾ ಖುಲಾಸೆಯಾದ ಪ್ರಕರಣಗಳ ಮಾಹಿತಿಯನ್ನು ಕೂಡ ಕಡ್ಡಾಯವಾಗಿ ನೀಡಬೇಕು ಎಂದು ಹೇಳಲಾಗಿದೆ.