ಬೆಂಗಳೂರು: ಅಕ್ಟೋಬರ್ 30ರಂದು ಸಿಂದಗಿ, ಹಾನಗಲ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯಲಿದೆ.
ಸಿಂದಗಿಯಲ್ಲಿ ಬಿಜೆಪಿಯವರು ಮನೆಮನೆಗೆ 10 ಸಾವಿರ ರೂಪಾಯಿ ಹಣ ಹಂಚುತ್ತಿದ್ದು, ಅಭ್ಯರ್ಥಿ ರಮೇಶ ಭೂಸನೂರ ಅವರಿಗೆ ಮತ ಹಾಕುವಂತೆ ಹಣ ಹಂಚಿಕೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಡಿಯೋ ಪ್ರದರ್ಶಿಸಿದ್ದಾರೆ.
ರಮೇಶ ಭೂಸನೂರ ಭಾವಚಿತ್ರ, ಬಿಜೆಪಿ ಚಿಹ್ನೆ ಇರುವ ಕವರ್ ನಲ್ಲಿ 10 ಸಾವಿರ ರೂಪಾಯಿ ಹಣ ಇಟ್ಟು ಮನೆಮನೆಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಮೊಬೈಲ್ ನಲ್ಲಿ ಈ ವಿಡಿಯೋವನ್ನು ಡಿ.ಕೆ. ಶಿವಕುಮಾರ್ ಪ್ರದರ್ಶಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಮನೆ ಬಳಿ ಮಾತನಾಡಿದ ಅವರು, ಇದಕ್ಕಿಂತ ಇನ್ನೇನು ಹೆಚ್ಚಿನ ಸಾಕ್ಷಿ ಬೇಕು? ಮುಖ್ಯಮಂತ್ರಿಗಳು, ಅವರ ಪಕ್ಷದ ಅಧ್ಯಕ್ಷರು ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.
ಪ್ರತಿಯೊಂದು ಮನೆಗೆ 10 ಸಾವಿರ ರೂಪಾಯಿ ಹಂಚಿಕೆ ಮಾಡಲಾಗುತ್ತಿದೆ. ಉಪಚುನಾವಣೆಯಲ್ಲಿ ಬಿಜೆಪಿಯವರು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ವಿಡಿಯೋ ಬಾಂಬ್ ಸಿಡಿಸಿದ ಡಿಕೆಶಿ, ವಿಡಿಯೋವನ್ನು ನಮ್ಮ ಸ್ಥಳೀಯ ಕಾರ್ಯಕರ್ತರು ಕಳುಹಿಸಿಕೊಟ್ಟಿದ್ದಾರೆ. ಉಪಚುನಾವಣೆಯಲ್ಲಿ ಏನೇನು ಬೇಕು ಎಲ್ಲವೂ ನಡೆಯುತ್ತಿದೆ. ಮುಖ್ಯಮಂತ್ರಿಗಳು ಪರ್ಮನೆಂಟಾಗಿ ಅಲ್ಲಿಯೇ ಇದ್ದುಬಿಡಲಿ. ರಾಜ್ಯವನ್ನು ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ಈ ಬಿಜೆಪಿಯವರು ಎಂದು ಕಿಡಿಕಾರಿದ್ದಾರೆ.