ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವಕ್ಕೆ ಭಾರಿ ಪೈಪೋಟಿ ಶುರುವಾಗಿದೆ. ಕೇಂದ್ರ ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆ ಮತ್ತು 5 ರಾಜ್ಯಗಳ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಕೇಂದ್ರ ಪದಾಧಿಕಾರಿಗಳ ತಂಡವನ್ನು ಪುನರ್ ರಚನೆ ಮಾಡಿದೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ. ರವಿ ಅವರನ್ನು ಕೈ ಬಿಡಲಾಗಿದ್ದು, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಮುಂದುವರಿಸಲಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸಿ.ಟಿ. ರವಿ ಮತ್ತು ಶೋಭಾ ಕರಂದ್ಲಾಜೆ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿವೆ. ಸಿ.ಟಿ. ರವಿ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಒಕ್ಕಲಿಗರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದಲ್ಲಿ ಲಿಂಗಾಯತರಿಗೆ ವಿಧಾನಸಭೆ ವಿಪಕ್ಷ ನಾಯಕ ನೀಡಲು ಚಿಂತನೆ ನಡೆದಿದೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ವಿಪಕ್ಷ ನಾಯಕನ ಸ್ಥಾನಕ್ಕೆ ಕೇಳಿಬಂದಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ್ನ ಸ್ಥಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಹಾಗೂ ರಘುನಾಥರಾವ್ ಮಲ್ಕಾಪುರೆ ಅವರ ನಡುವೆ ಪೈಪೋಟಿ ಇದೆ ಎಂದು ಹೇಳಲಾಗಿದೆ.