
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಕಣದಲ್ಲಿ ಅಂತಿಮವಾಗಿ 2613 ಅಭ್ಯರ್ಥಿಗಳು ಉಳಿದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಸೋಮವಾರದವರೆಗೆ 517 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದುಕೊಂಡಿದ್ದಾರೆ.
ಕಣದಲ್ಲಿ 2427 ಪುರುಷರು, 185 ಮಹಿಳೆಯರು ಹಾಗೂ ಇಬ್ಬರು ಇತರೆ(ತೃತೀಯ ಲಿಂಗಿಗಳು) ಇದ್ದಾರೆ, ಬಿಜೆಪಿ ಎಲ್ಲಾ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ 223, ಜೆಡಿಎಸ್ 207 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಆಮ್ ಆದ್ಮಿ ಪಕ್ಷದ 209 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 133 ಕ್ಷೇತ್ರಗಳಲ್ಲಿ ಬಿ.ಎಸ್.ಪಿ. ಅಭ್ಯರ್ಥಿಗಳು ಸ್ಪರ್ಧಿಸಿದ್ದು, 4 ಕ್ಷೇತ್ರಗಳಲ್ಲಿ ಸಿಪಿಐಎಂ, 8 ಕ್ಷೇತ್ರಗಳಲ್ಲಿ ಜೆಡಿಯುಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮಾನ್ಯತೆ ಇಲ್ಲದ ನೋಂದಾಯಿತ ಪಕ್ಷಗಳಿಂದ 693 ಹಾಗೂ 918 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಳ್ಳಾರಿ ನಗರ ಕ್ಷೇತ್ರದಲ್ಲಿ ಅತ್ಯಧಿಕ 24 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹೊಸಕೋಟೆಯಲ್ಲಿ 23, ಗಂಗಾವತಿಯಲ್ಲಿ 19 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 15 ಅಭ್ಯರ್ಥಿಗಳಿಗಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ಎರಡು ಬ್ಯಾಲೆಟ್ ಯೂನಿಟ್ ಗಳನ್ನು ಬಳಕೆ ಮಾಡುತ್ತಿದ್ದು, ಈ ಬಾರಿ 16 ಕ್ಷೇತ್ರದಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂತಹ ಇಂತಹ ಕ್ಷೇತ್ರಗಳಲ್ಲಿ ಎರಡು ಬ್ಯಾಲೆಟ್ ಯೂನಿಟ್ ಬಳಕೆ ಮಾಡಲಾಗುವುದು.