ಪುಣೆ: ಸಸ್ವಾದ್ ತಹಶೀಲ್ದಾರ್ ಕಚೇರಿಯಿಂದ ಇವಿಎಂ ಯಂತ್ರಗಳು ಕಳುವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಎರಡು ದಿನಗಳ ಹಿಂದೆ ಘಟನೆ ನಡೆದಿತ್ತು. ವಿದ್ಯುನ್ಮಾನ ಮತಯಂತ್ರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಪುರಂದರ ತಹಶೀಲ್ದಾರ್ ವಿಕ್ರಂ ರಜಪೂತ್, ಸಬ್ ಡಿವಿಜನಲ್ ಆಫೀಸರ್ ವರ್ಷಾ ಲಾಂಗಾಗೆ, ಡಿವೈಎಸ್ಪಿ ತಾನಾಜಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ.
ತಹಶೀಲ್ದಾರ್ ಕಚೇರಿಯಲ್ಲಿ ಇವಿಎಂ ಯಂತ್ರಗಳು ಕಳವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂವರನ್ನು ಅಮಾನತು ಮಾಡಲಾಗಿದೆ. ಪುರಂದರ ತಾಲೂಕಿನ ಸಸ್ವಾಡ್ ನಲ್ಲಿ ಸೋಮವಾರ ಇವಿಎಂ ಮತಯಂತ್ರ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿ ಮತ ಯಂತ್ರ ವಶಕ್ಕೆ ಪಡೆದುಕೊಂಡಿದ್ದರು. ಸ್ಟ್ರಾಂಗ್ ರೂಮ್ ನಲ್ಲಿ ಇರಿಸಿದ್ದ ಮತ ಯಂತ್ರಗಳನ್ನು ಕಳವು ಮಾಡಿದ ಬಗ್ಗೆ ಪುಣೆ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.