ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ತೆಲಂಗಾಣ ಡಿಜಿಪಿ ಅಂಜನಿ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ಭಾನುವಾರ ತೆಲಂಗಾಣ ವಿಧಾನಸಭೆ ಚುನಾವಣೆಯ ಪೂರ್ಣ ಫಲಿತಾಂಶ ಬರುವ ಮುನ್ನವೇ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಅಂಜನಿ ಕುಮಾರ್ ಅವರು ಶುಭಕೋರುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅಂಜನಿ ಕುಮಾರ್ ಅವರನ್ನು ಅಮಾನತು ಮಾಡಿದೆ.
ರೇವಂತ್ ರೆಡ್ಡಿ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಲಾಗಿದೆ.
2009, 2014ರಲ್ಲಿ ಆಂಧ್ರಪ್ರದೇಶದ ಕೋಡಂಗಲ್ ವಿಧಾನಸಭಾ ಕ್ಷೇತ್ರದಿಂದ ಟಿಡಿಪಿಯಿಂದ ಜಯಗಳಿಸಿದ ರೇವಂತ್ ರೆಡ್ಡಿ 2017ರಲ್ಲಿ ಕಾಂಗ್ರೆಸ್ ಸೇರಿದ್ದರು. 2018ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾದರು. ಕಳೆದ ವರ್ಷ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪಕ್ಷದ ಕೇಂದ್ರ ನಾಯಕರು ಆಸಕ್ತಿ ತೋರಿಸಿದ್ದರು. ಆದರೆ, ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ವಿರೋಧದ ಹಿನ್ನೆಲೆಯಲ್ಲಿ ರೇವಂತ್ ಬಿಜೆಪಿ ಸೇರಿರಲಿಲ್ಲ. ಬಳಿಕ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪಾರ್ಟಿ ಬಿಟ್ಟು ಹೋಗಿದ್ದ ಪ್ರಮುಖರನ್ನು ಕಾಂಗ್ರೆಸ್ ಗೆ ಕರೆತರುವಲ್ಲಿ ಯಶಸ್ವಿಯಾದ ರೇವಂತ್ ರೆಡ್ಡಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.