ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಸಡಿಲಗೊಂಡಿದೆ. ಅಭಿವೃದ್ಧಿ ಕೆಲಸಗಳ ಟೆಂಡರ್ ಪ್ರಕ್ರಿಯೆ, ಬರ ನಿರ್ವಹಣೆ, ಪರಿಹಾರ ಸಂಬಂಧ ಸಭೆ, ಅಭಿವೃದ್ಧಿ ಕೆಲಸಗಳಿಗೆ ಚುನಾವಣಾ ಆಯೋಗ ಅಸ್ತು ಎಂದಿದೆ.
ಬರ ಪರಿಹಾರ ಸಂಬಂಧ ಪರಿಶೀಲನಾ ಸಭೆ ನಡೆಸುವುದು, ಅಭಿವೃದ್ಧಿ ಕೆಲಸಗಳ ಟೆಂಡರ್ ಪ್ರಕ್ರಿಯೆ ಮೊದಲಾದ ಉದ್ದೇಶಗಳಿಗೆ ನಿರ್ಬಂಧ ಕೈ ಬಿಡಲಾಗಿದೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎರಡು ಹಂತದಲ್ಲಿ ನಡೆದಿತ್ತು. ಚುನಾವಣೆ ಮುಗಿದ ಬೆನ್ನೆಲೆ ಮೇ 8 ರಂದು ರಾಜ್ಯ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಪರಿಶೀಲನಾ ಸಮಿತಿ ಸಲ್ಲಿಸಿದ ಮನವಿ ಆಧರಿಸಿ ಚುನಾವಣಾ ಆಯೋಗ ವಿವಿಧ ಉದ್ದೇಶಗಳಿಗೆ ನೀತಿ ಸಮಿತಿಯಿಂದ ವಿನಾಯಿತಿ ನೀಡಿದೆ. ಅಭಿವೃದ್ಧಿ ಕೆಲಸ, ಮೂಲ ಸೌಕರ್ಯ ಕಾಮಗಾರಿ, ಸರಕು ಮತ್ತು ಸೇವೆ ಖರೀದಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗೆ ಆಯೋಗ ಅಸ್ತು ಎಂದಿದೆ.
ಬರ ಪರಿಹಾರ ಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ಪರಿಶೀಲನ ಸಭೆ ನಡೆಸಲು ಕೂಡ ಆಯೋಗ ವಿನಾಯಿತಿ ನೀಡಿದೆ.
ವಿವಿಧ ನಿಗಮ ಮಂಡಳಿ, ಸ್ಥಳೀಯ ಸಂಸ್ಥೆಗಳು ಸಭೆ ನಡೆಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಕೂಡ ಒಪ್ಪಿಗೆ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಅನುಮತಿ ಆಧರಿಸಿ ರಾಜ್ಯ ಮುಖ್ಯ ಕಾರ್ಯದರ್ಶಿ ರಜನೀಶ್ ಗೊಯಲ್ ಮೂರು ಪ್ರತ್ಯೇಕ ಸುತ್ತೋಲೆ ಹೊರಡಿಸಿದ್ದಾರೆ.