ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಗೆ ಆಯೋಗ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಜನವರಿ 7 ರಿಂದ ರಾಜ್ಯಗಳಿಗೆ ಆಯೋಗ ಭೇಟಿ ನೀಡಲಿದೆ.
ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸಿರುವ ಆಯೋಗ (ಇಸಿ) ಮುಂದಿನ ವಾರ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಭೇಟಿ ನೀಡುವ ಮೂಲಕ ಪ್ರಾರಂಭಿಸಲಿದೆ.
ಭೇಟಿಗೆ ಮುಂಚಿತವಾಗಿ, ಉಪ ಚುನಾವಣಾ ಆಯುಕ್ತರು ಜನವರಿ 6 ರಂದು ಎರಡೂ ರಾಜ್ಯಗಳಲ್ಲಿನ ಸಿದ್ಧತೆಗಳ ಬಗ್ಗೆ ಪೂರ್ಣ ಆಯೋಗಕ್ಕೆ ಸಂಕ್ಷಿಪ್ತ ಮಾಹಿತಿಯನ್ನು ನೀಡಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಉಪ ಚುನಾವಣಾ ಆಯುಕ್ತರು ಬಹುತೇಕ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.
ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ರಾಜಕೀಯ ಪಕ್ಷಗಳು, ಹಿರಿಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಲು ಮತ್ತು ಚುನಾವಣಾ ಯಂತ್ರವನ್ನು ಪರಿಶೀಲಿಸಿಲು ಚುನಾವಣಾ ಆಯೋಗವು ರಾಜ್ಯಗಳಿಗೆ ಪ್ರವಾಸ ಮಾಡುವುದು ಸಾಮಾನ್ಯವಾಗಿದೆ ಎಂದು ವರದಿ ತಿಳಿಸಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡುವ ಚುನಾವಣಾ ಆಯೋಗದ ಪ್ರಯಾಣವು ಈ ಹಂತದಲ್ಲಿ ಅನಿಶ್ಚಿತವಾಗಿ ಉಳಿದಿದೆ. ಕೆಲವು ರಾಜ್ಯಗಳನ್ನು, ವಿಶೇಷವಾಗಿ ಇತ್ತೀಚೆಗೆ ವಿಧಾನಸಭಾ ಚುನಾವಣೆಗಳು ನಡೆದ ರಾಜ್ಯಗಳನ್ನು ಆಯೋಗದ ಭೇಟಿಗಳಿಂದ ಹೊರಗಿಡುವ ಸಾಧ್ಯತೆಯಿದೆ.