
ನವದೆಹಲಿ: ವಿಧಾನಸಭೆ ಕ್ಷೇತ್ರಗಳಲ್ಲಿ ಬೂತ್ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ.
ದೇಶಾದ್ಯಂತ 4123 ಚುನಾವಣಾ ನೋಂದಣಿ ಅಧಿಕಾರಿಗಳು, 788 ಜಿಲ್ಲಾ ಚುನಾವಣಾ ಅಧಿಕಾರಿಗಳು, 36 ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಸರ್ವ ಪಕ್ಷ ಸಭೆ ನಡೆಸಲು ಸೂಚಿಸಲಾಗಿದೆ. ಎಲ್ಲ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಅವರ ಸಲಹೆ ಮೇರೆಗೆ ಬೂತ್ ಮಟ್ಟದಲ್ಲಿ ಆದ್ಯತೆ ಮೇಲೆ ಸಮಸ್ಯೆಗಳನ್ನು ಪರಿಹರಿಸಬೇಕು. ಮಾರ್ಚ್ 31ರವರೆಗೆ ಈ ಸಭೆಗಳನ್ನು ನಡೆಸಬೇಕು ಎಂದು ಚುನಾವಣಾ ಆಯೋಗ ಸೂಚನೆ ನೀಡಿದೆ.
ಅನೇಕ ರಾಜ್ಯಗಳಲ್ಲಿ ಚುನಾವಣೆಗೆ ಮೊದಲು ಬೂತ್ ಮಟ್ಟದ ಸಮಸ್ಯೆಗಳ ದೂರುಗಳು ಬಾಕಿ ಇರುವುದರಿಂದ ಮಾರ್ಚ್ 4ರಂದು ದೆಹಲಿಯಲ್ಲಿ ನಡೆದ ಎಲ್ಲಾ ರಾಜ್ಯಗಳ ಹಾಗೂ ಕೇಂದ್ರ ಆಡಳಿತ ಪ್ರದೇಶಗಳ ಸಿಇಒಗಳ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಆಯೋಗ ಈ ನಿರ್ಧಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿಗಳು ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಬಾಕಿ ಉಳಿದಿರುವ ಮತಗಟ್ಟೆ ಮಟ್ಟದ ಸಮಸ್ಯೆಗಳನ್ನು ಪರಿಹರಿಸಲು ಸರ್ವ ಪಕ್ಷ ಸಭೆಗಳನ್ನು ನಡೆಸಲು ಆರಂಭಿಸಿದ್ದಾರೆ ಎನ್ನಲಾಗಿದೆ.