ಬೆಂಗಳೂರು: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಆಯೋಗ ಆನ್ ಲೈನ್ ವಹಿವಾಟಿನ ಮೇಲೆ ತೀವ್ರ ನಿಗಾ ವಹಿಸಿದೆ.
ಹಣ ಹಂಚಿ ವೋಟ್ ಪಡೆಯುವ ನಿಟ್ಟಿನಲ್ಲಿ ರಾಜಕೀಯ ನಾಯಕರು ಮುಂದಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಆನ್ ಲೈನ್ ವಹಿವಾಟಿನ ಮೇಲೆ ಹದ್ದಿನಕಣ್ಣಿಟ್ಟಿದೆ.
ಫೋನ್ ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ಯಾವುದೇ ರೀತಿಯ ಯುಪಿಐ ಆಪ್ ಗಳ ಮೂಲಕ ರವಾನೆಯಾಗುವ ಹಣಕಾಸು ವಹಿವಾಟಿನ ಮೇಲೆ ಚುನಾವಣಾ ಆಯೋಗ ನಿಗಾ ವಹಿಸಿದೆ. ಮತದಾರರಿಗೆ ಯಾವುದೇ ಸ್ವರೂಪದಲ್ಲಿ ಆಮಿಷ ಒಡ್ಡಿ ಮತಗಳನ್ನು ಸೆಳೆಯಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಚುನಾವಣಾ ಆಯೋಗ ಇದಕ್ಕಾಗಿ ಪ್ರತ್ಯೇಕ ತಂಡವನ್ನು ರಚನೆ ಮಾಡಿದ್ದು, ಫೋನ್ ಪೇ, ಗೂಗಲ್ ಪೇ, ಪೇಟಿಎಂ ಸಂಸ್ಥೆಗಳ ಜೊತೆ ಸಭೆ ನಡೆಸಿ ಚರ್ಚಿಸಿ ಪ್ರತಿದಿನದ ವಹಿವಾಟಿನ ವರದಿ ಪಡೆಯುತ್ತಿದೆ. ನಿರ್ದಿಷ್ಟ ಮೊತ್ತದ ಹಣ ಹೆಚ್ಚಿನ ಸಂಖ್ಯೆಯ ಜನರಿಗೆ ರವಾನೆ ಮಾಡುತ್ತಿದ್ದರೆ ಅಂತವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲು ಮುಂದಾಗಿದೆ.